ನುಡಿಬೀಡು

ಅಲ್ಲಿಲ್ಲಿ ಅಷ್ಟಿಷ್ಟು ನೋಡಿದ್ದು ಕೇಳಿದ್ದು ಓದಿದ್ದು

Name:

ನುಡಿಗಳೇ ಎನ್ನ ರತ್ನಗಳು ನುಡಿಗಳೇ ಎನ್ನ ವಸ್ತ್ರಗಳು ನುಡಿಗಳೇ ಎನ್ನ ಜೀವಾನ್ನ ನುಡಿಗಳೇ ನಾನೀವ ಧನದಾನ ನುಡಿಗಳೇ ಎನ್ನದೇವರೆಂಬ ತುಕಾ ನುಡಿಗಳೇ ಎನಗೆ ಪೂಜ್ಯ ---------- ತುಕಾರಾಮ

Sunday, September 17, 2006

ನಿರಾಶ್ರಿತ ತಾಯಿ ಮತ್ತು ಮಗು

ಮಡೋನಾ ಮತ್ತು ಮಗುವಿನ ಯಾವೊಂದು ಕಲೆಯೂ
ನಿಲುಕದಂತ ಚಿತ್ರವೊಂದರಲ್ಲಿ
ಕೆಲವೇ ಕ್ಷಣಗಳಲ್ಲಿ ಮರೆಯಬೇಕಿರುವ ತನ್ನ
ಕಂದನ ಕುರಿತ ತಾಯಿಯೊಬ್ಬಳ ವಾತ್ಸಲ್ಯ.

ಬೇಧಿಯಿಂದ ಬಳಲುವ ಕುಂಡೆ ತೊಳೆಯದ ಮಕ್ಕಳ ವಾಸನೆ
ಗಾಳಿ ತುಂಬಿತ್ತು;
ತಮ್ಮ ನಿತ್ರಾಣ ಪಕ್ಕೆಲುಬು, ಬತ್ತಿದ ಅಂಡು,
ಕಂಗಾಲು ಹೊಟ್ಟೆಯ ಹೊತ್ತು ಎತ್ತಲಾರದ ಹೆಜ್ಜೆ
ಇಡುತ್ತ ಸಾಗಿದ್ದರು.
ಅಲ್ಲಿಯ ಹೆಚ್ಚುಪಾಲು ತಾಯಂದಿರು
ಭರವಸೆ ತೊರೆದು ಮಕ್ಕಳಾರೈಕೆ ಬಿಟ್ಟಿದ್ದರೂ,
ಇವಳಲ್ಲ. ಹಲ್ಲುಗಳ ನಡುವೆ ಒಂದು ಪ್ರೇತ ನಗೆಯಿತ್ತು,
ಕಣ್ಣಲ್ಲಿ ತಾಯಿಹೆಮ್ಮೆಯ ಪ್ರೇತಕಳೆ,
ಮಗನ ತಲೆಮೇಲೆ ಅಳಿದುಳಿದ, ಧೂಳು ಮೆತ್ತಿದ ಕೂದಲು ಬಾಚುತ್ತ
- ಕಣ್ಣಲ್ಲೇ ನಗುತ್ತ -
ಬೈತಲೆ ತೆಗೆದು ಒಪ್ಪಮಾಡುತ್ತ...

ಇನ್ನಾವುದೋ ದಿನದ ಜೀವನದಲ್ಲಿ
ಇದೊಂದು ಅವನ ಬೆಳಗಿನ ತಿಂಡಿಯಂತೆ ಶಾಲೆಯ ಮುಂಚಿನ
ಸಾಧಾರಣ ದೈನಂದಿನ ಕ್ರಿಯೆಯಾಗಬಹುದಿತ್ತು.

ಈಗವಳು,
ಚಿಕ್ಕ ಗೋರಿಯ ಮೇಲೆ ಹೂ ಸುರಿದಂತೆ
ಇಲ್ಲಿ ತೊಡಗಿಕೊಂಡಿದ್ದಳು.

-------- ಚಿನುವಾ ಅಚೀಬೆ (Refugee Mother and Child)

ಒಂದಾನೊಂದು ಕಾಲದಲ್ಲಿ

ಮಗು,
ಒಂದಾನೊಂದು ಕಾಲದಲ್ಲಿ
ಅವರು ಎದೆಯಾಳದಿಂದ ನಗುತ್ತಿದ್ದರು
ಮತ್ತು ನಗು ಕಣ್ಣುಗಳಲಿದ್ದವು;
ಆದರೀಗ, ಅವರು ಬರಿದೆ ಹಲ್ಲು ತೋರಿಸುತ್ತಾರೆ
ಅವರ ಮಂಜಿನಂತ ತಣ್ಣಗಿನ ಕಣ್ಣುಗಳು
ಹುಡುಕುತ್ತವೆ ನನ್ನ ನೆರಳುಗಳ ಹಿಂದೆ.

ನಿಜವಾಗೂ, ಒಂದು ಕಾಲದಲ್ಲಿ
ಅವರು ಎದೆಯಾಳದಿಂದ ಕೈಕುಲುಕುತ್ತಿದ್ದರು,
ಮಗು, ಅದೀಗ ಮುಗಿದ ಕಾಲ;
ಈಗವರು ಕೈಕುಲುಕುತ್ತಾರೆ ಅರೆಮನಸಲ್ಲಿ
ನನ್ನ ಖಾಲಿಕಿಸೆಯನ್ನು ತಡಕುತ್ತಾವೆ ಅವರ ಕೈಗಳು.

ಬನ್ನಿ ಮನೆಗೆ ಮತ್ತೆ, ಆರಾಮಾಗಿರಿ, ಅಂತಾರೆ.
ಮನೆಗೆ ಹೋದರೆ, ಅಲ್ಲಿ ಆರಾಮಿಸಿದರೆ, ಒಮ್ಮೆ,
ಇನ್ನೊಮ್ಮೆ - ಅಷ್ಟೆ ಮತ್ತೊಮ್ಮೆ ಹೋಗುವಂತಿಲ್ಲ
ಬಾಗಿಲು ಮುಚ್ಚಿರುತ್ತದೆ ನಾ ಬಂದರೆ.

ಹಾಗಾಗಿ ಮಗು, ನಾನು ಹಲವು ವಿಷಯ ಕಲಿತಿದ್ದೇನೆ:
ಬಟ್ಟೆಯಂತೆ ಮುಖ ಬದಲಿಸಲು -
ಮನೆ ಮುಖ, ಕಛೇರಿ ಮುಖ, ಬೀದಿ ಮುಖ,
ಗೃಹಸ್ಥನ ಮುಖ, ಸಮಾರಂಭಗಳ ಮುಖ -
ಆ ಎಲ್ಲ ಮುಖಗಳಲ್ಲಿ ಬಗೆಬಗೆಯ ನಗೆಯನ್ನು
ನಿಕ್ಕಿಗೊಳಿಸಿದ್ದೇನೆ,
ನಾನೂ ಕೂಡ ನಗುವಾಗ ಬರಿತೆ ಹಲ್ಲು ಕಿರಿಯುವುದ
ಮನಸಿಲ್ಲದೇ ಕೈಕುಲುಕುವುದ ಕಲಿತಿದ್ದೇನೆ;
'ಮತ್ತೆ ಬನ್ನಿ' ಅನ್ನುತ್ತೇನೆ, ಮನಸಲ್ಲಿ 'ತೊಲಗು ಶನಿ' ಅನ್ನುತ್ತ;
'ಕಂಡು ಸಂತೋಷ' ಅನ್ನುತ್ತೇನೆ ಸಂತೋಷವಿಲ್ಲದೇ,
ಹಾಗೂ, ತಲೆಚಿಟ್ಟಾಗಿದ್ದರೂ, 'ನಿಮ್ಮ ಜತೆ ಮಾತಾಡಿ ಖುಷಿಯಾಯಿತು' ಅನ್ನುತ್ತೇನೆ.

ನಂಬು ಮಗುವೇ,
ನಾನು ಮತ್ತೆ ನಾನಾಗಬೇಕು,
ನಿನ್ನ ಹಾಗಿದ್ದಾಗ ನಾನಿದ್ದಂತೆ;
ಈ ಮೂಕಗೊಳಿಸುವ ಕಲಿಕೆಯೆಲ್ಲ ತೊರೆಯಬೇಕು;
ಎಲ್ಲಕ್ಕಿಂತ ಹೆಚ್ಚಾಗಿ, ನಾನು ಮತ್ತೆ ಕಲಿಯಬೇಕು
ನಗುವುದನ್ನು;
ಕನ್ನಡಿಯೆದುರು ನನ್ನ ನಗೆಯಲ್ಲಿ
ಈಗ ನಾನು ಹಾವಿನ ಹಲ್ಲುಗಳನ್ನಷ್ಟೇ ಕಾಣುತ್ತಿದ್ದೇನೆ!

ತೋರು ನನ್ನ ಮಗುವೇ,
ನಗುವ ಬಗೆಯನ್ನು:
ತೋರಿಸು
ನಾನು ಒಂದು ಕಾಲದಲ್ಲಿ ನಿನ್ನಂತೆ ಇದ್ದಾಗ
ನಗುತ್ತಿದ್ದುದನ್ನು
ಕಲಿಸು ಮಗುವೆ.

------- ಗೆಬ್ರಿಯಲ್ ಒಕಾರಾ (Once upon a time)

Friday, September 08, 2006

ಹಸಿವು

-- ಜಯಂತ ಮಹಾಪಾತ್ರ (Hunger)

ದೇಹದಾಹದ ಸೆಳವು ನನ್ನಲ್ಲಿ ಇಷ್ಟೆಂದು ನಂಬಲಾರೆ;
ಮೀನುಗಾರನೆಂದ ಅಸಡ್ಡೆಯಿಂದ: ಬೇಕಾ ನಿನಗೆ ಅವಳು.
ನರಜಾಲದಂತೆ ಅವನ ಹಿಂದೆಳೆವ ಬಲೆ; ಶಬ್ದಗಳೇ
ತನ್ನ ಉಳಿವಿನ ಇರಾದೆ ಪೂಜ್ಯಗೊಳಿಸಿತೆಂಬಂತಿದ್ದ ಅವನು.
ಕಣ್ಣೊಳಗೆ ಬಿಳಿಯೆಲುಬು ತೊನೆಯುವುದ ಕಂಡೆ.

ವಿಶಾಲ ಮರಳುದಿನ್ನೆಗುಂಟ ಅವನ ಹಿಂದೆ ನಡೆದೆ,
ಮನಸು ಮಾಂಸದ ಕವಣೆಯೊಳಗೆ ಗುದ್ದಾಡುತ್ತಲಿತ್ತು.
ನಾನಿರುವ ಮನೆಯ ಸುಡುವುದೊಂದೇ ಉಳಿದ ನಿರೀಕ್ಷೆಯಾಗಿತ್ತು.

ನನ್ನ ತೋಳುಗಳಗುಂಟ ಮೌನ; ಅವನ ದೇಹ ಸಮುದ್ರದಿಂದ
ಬಲೆಯೊಳಗೆ ಹಿಡಿದುತಂದ ನೊರೆಗಳನ್ನು ಪರಚುತ್ತಿತ್ತು.
ಮಿಣುಕು ಬೆಳಕಲ್ಲಿ ಗಾಯದಂತೆ ಅವನ ಬಿಡಾರ ತೆರೆದುಕೊಂಡಿತು.
ನಾನೇ ಗಾಳಿ ಒಳಗೆ, ಹಾಗೂ ಮುಂಚಿನ ದಿನಗಳು ರಾತ್ರಿಗಳು.
ಸೋಗೆ ತೊಗಲನ್ನು ಸೋಕಿದವು. ಬಿಡಾರದೊಳಗೆ
ಎಣ್ಣೆಬತ್ತಿಯೊಂದು ಗೋಡೆಯ ಮೇಲೆ ತಾಸುಗಳನ್ನು ಕಿಸಿದಿತ್ತು.
ಮತ್ತೆ ಮತ್ತೆ ಜಿಗುಟು ಮಸಿ ಮನಸಿನವಕಾಶವ ತುಂಬಿತ್ತು.
ಅವನು ಹೇಳುತ್ತಿದ್ದ: ಬೇಗ ಬರ್ತೇನೆ, ನಿನ್ನ ಬಸ್ಸು ಒಂಬತ್ತಕ್ಕೆ.
ಬಾನು ಬಿತ್ತು ನನ್ನ ಮೇಲೆ ಹಾಗೂ ಅಪ್ಪನೊಬ್ಬನ ದಣಿದ ಕಪಟತನ.
ಉದ್ದಕ್ಕೆ ಸಪೂರವಿದ್ದ ಅವಳ ವಯಸ್ಸು ರಬ್ಬರಿನಂತೆ ತಣ್ಣಗಿತ್ತು.
ಹುಳುವಿನಂತ ಕಾಲಗಲಿಸಿದಳು. ಅಲ್ಲಿನ ಹಸಿವು ಅರಿತೆ,
ಆ ಇನ್ನೊಂದು ಹಸಿವು, ಮೀನಂತೆ ತಿಣುಕುತ್ತ ಒಳತಿರುಗಿತು.ಜಯಂತ ಮಹಪಾತ್ರ ಇಂಗ್ಲೀಷಿನಲ್ಲಿ ಬರೆಯುವ ಒರಿಯಾ ಕವಿ. ತಮ್ಮ ಸೂಕ್ಷ್ಮ ಸಂವೇದಿ ಕವನಗಳಿಗೆ ಪ್ರಸಿದ್ಧರು. ಇವರ ಕವನಗಳಲ್ಲಿ ಓರಿಸ್ಸಾದ ನದಿನಾಡು-ನಡೆನುಡಿ-ನಾಡಿಮಿಡಿತವಾಗಿ ಬರುತ್ತವೆ. ತಡವಾಗಿ ಬರೆಯಲು ಶುರುಮಾಡಿದ ಜಯಂತ ಶೀಘ್ರ ಭಾರತದ ಒಳ್ಳೆಯ ಕವಿಗಳಲ್ಲಿ ಒಬ್ಬರೆಂದು ಹೆಸರಾದರು. ಭಾಷೆಯ ಚತುರ ಪ್ರಯೋಗ, ಸಾಮಾನ್ಯ ಜೀವನದ ಬಗೆ ಬಗೆಯ ನವೆಗಳನ್ನು ಚುರುಕು ತಾಗುವಂತೆ ಬರೆವ ಜಯಂತ ತಮ್ಮ ಕಾವ್ಯವನ್ನು ಅಂತಸ್ಸಾಕ್ಷಿಯ ಒರೆಗಲ್ಲಾಗಿ ಉಪಯೋಗಿಸುತ್ತಾರೆ. ನಮ್ಮ ಪರಿಸರದೊಳಗೆ ಕಾಣುವ ನಾನಾ ಕೀಟಲೆಯ ನಿತ್ಯಬದುಕಿನ ಬಗ್ಗೆ, ಬಡತನದ ಬೇಗೆಯಲ್ಲಿ ಸಿಲುಕಿ ನಲುಗಿದ ಒಂದಿಡೀ ತಲೆಮಾರಿನ ಬಗ್ಗೆ ಅವರ ಕವನಗಳಲ್ಲಿ ಸೂಕ್ಷ್ಮ ಪರೀಕ್ಷೆ ಇರುತ್ತದೆ. ಈ ಕವನದಲ್ಲಿ ಹಸಿವು ಶಬ್ದದ ಎರಡೂ ಅರ್ಥಗಳು ಪರಿಣಾಮಕಾರಿಯಾಗಿ ಬಂದಿವೆ. ಬಡತನದಿಂದ ಸೊರಗಿದ ತಂದೆಯೊಬ್ಬ ತನ್ನ ಮಗಳ ದೇಹಮಾರಿ ಹೊಟ್ಟೆಪಾಡು ಮಾಡುತ್ತಲಿದ್ದಾನೆ. ಕಾಮದ ಹಸಿವಿನ ತೃಪ್ತಿಗಾಗಿ ಹುಡುಕುತ್ತಿರುವ ಪ್ರವಾಸಿಗನೊಬ್ಬ ಇಲ್ಲಿ ನಿರೂಪಕ. ತಂದೆಯೇ ತನ್ನ ಆಡುವ ವಯಸ್ಸಿನ ಮಗಳನ್ನು ಸೂಳೆಯಾಗಿಸುವ, ಹಾಗೂ ಹಾಗೆ ಮಾಡಿ ಹಸಿವನ್ನು ಎದುರಿಸುವ ಭಯಾನಕ ಚಿತ್ರದೆದುರು ಆತನ ಕಾಮುಕತೆ ನಲುಗಿಬಿಡುತ್ತದೆ. ಮಾರ್ಮಿಕವಾದ ಈ ಕವನದಲ್ಲಿ ಒದಗುವ ಸಾಮಾಜಿಕ ಟೀಕೆ ಎಷ್ಟು ಸೂಕ್ಷ್ಮವಾಗಿ ಬಂದಿದೆ ನೋಡಿ.

Wednesday, September 06, 2006

ಆತ್ಮ, ಪಾಪಿ ಭೂಮಿಯ ಕೇಂದ್ರ

ಆತ್ಮ, ಪಾಪಿ ಭೂಮಿಯ ಕೇಂದ್ರ

ಪಾಪ, ಆತ್ಮ, ನನ್ನ ಈ ಪಾಪಿ ನೆಲದ ಕೇಂದ್ರವೆ
ಯಾಕೆ ಹೂತಿರುವೆ ಈ ಬಂಡುಕೋರರ ನಡುವಲ್ಲಿ
ಯಾಕೆ ಒಳಗೊಳಗೇ ಸೊರಗುವೆ, ಕೊರಗ ಸಹಿಸುವೆ
ಹೊರಗೋಡೆಗಳನು ಸಿಂಗರಿಸಿ ಅದ್ದೂರಿ ಬಣ್ಣದಲಿ?

ಯಾಕಿಷ್ಟು ಧಾರಾಳ ಕಾಸು ಇಷ್ಟು ತುಸುಗಾಲಕ್ಕೆ
ಪಡೆದ ಈ ಮಂಕು ಮಹಲಿಗಾಗಿ ಹೀಗೆ ವ್ಯಯಿಸುವುದು?
ಹುಳುಗಳೇ ನಾಳೆ ವಾರಸುದಾರರು ನಿನ್ನೀ ವೈಭವಕ್ಕೆ
ತಿನ್ನವೇನು ಅದನು? ಹೀಗೇ ತಾನೆ ದೇಹ ಕೊನೆಯಗುವುದು?

ಕಾರಣ ಆತ್ಮವೇ, ಬಾಳು, ಹೇರಿ ಎಲ್ಲ ನಷ್ಟ ಆಳಿನ ಮೇಲೆ
ಸವೆಯುತ್ತ ಆತ ನಿನ್ನ ಗೋದಾಮನ್ನು ಕೊಬ್ಬಿಸುವ
ಕೊಳ್ಳು ದೈವಿಕ ಮುದ್ದತು, ಮಾರಿ ಗಂಟೆಗಟ್ಟಳೆ ಕೊಳೆ
ಪೋಷಿಸು ಅಂತರಂಗವ, ಇನ್ನಿರದಂತೆ ಹೊರ ವೈಭವ;

ಮಾನವರ ಸೇವಿಸುವ ಆ ಸಾವನ್ನೇ ಸೇವಿಸುವಂತೆ
ಸಾವು ಬಂದರೆ ಒಮ್ಮೆ ಮತ್ತೆ ಸಾವೆಂದೂ ಬರದಂತೆ


ಶೇಕ್ಸಪಿಯರನ ೧೪೬ನೇ ಸುನೀತ ದೇಹ ಹಾಗೂ ಆತ್ಮದ ಕುರಿತಿದ್ದು, ಭೌತಿಕವನ್ನು ತಿರಸ್ಕರಿಸಿ ಆಧ್ಯಾತ್ಮಿಕವನ್ನು ಅಪ್ಪುಕೊಳ್ಳುವ ತರ್ಕವನ್ನು ಆತ್ಮಕ್ಕೆ ಸಂಭೋಧಿಸಿ ಪ್ರಸ್ತುತಪಡಿಸುತ್ತದೆ. ಇಲ್ಲಿ ಬರುವ ವಿಷಯ ಕಾವ್ಯ ವಸ್ತುವಾಗಿ ಹೊಸದಲ್ಲ (ಹಾಗೆ ನೋಡಿದರೆ ಶೇಕ್ಸಪಿಯರ ಹೊಸವಸ್ತುವಿನ ಹುಡುಕಾಟ ಮಾಡುವಾತನೇ ಅಲ್ಲ). ಇದೊಂದು ಚರ್ವಿತ ಚರ್ವಣ ವಸ್ತು ಹಾಗೂ ವಾದ. ದೇಹ ಕ್ಷಣಿಕ, ಆತ್ಮ ಸಾರ್ವಕಾಲಿಕ ಎಂಬುದೇ ಇಲ್ಲಿಯ ತಥ್ಯ. ಎಂದಿನಂತೇ ಇಲ್ಲಿ ತಥ್ಯದ ಸ್ತರದಲ್ಲಿ ಕಾಣದ ಜಾಣ್ಮೆ ಕಾವ್ಯಬಂಧದಲ್ಲಿ ಕಾಣುತ್ತದೆ. ಇಲ್ಲಿನ ರೂಪಕಗಳು ಮುಖ್ಯವಾಗಿ ವಾಣಿಜ್ಯ ವಲಯದಿಂದ ಬಂದಿದೆ ಎನ್ನುವುದು ಗಮನಾರ್ಹ. ಅಂದರೆ, ಭೌತಿಕ ಜೀವನ ಕ್ಷುಲ್ಲಕ ವೆನ್ನುವ ಮಾತೆಲ್ಲವೂ ಅಲಂಕೃತವಾಗಿವೆ, ಅದೂ ಕೂಡ ಕೊಡುಕೊಳ್ಳುವಿಕೆಯ ರೂಪಕಗಳಲ್ಲಿ. ಹಾಗಾಗಿ ಈ ಸುನೀತದಲ್ಲಿ ಬರುವ ರೂಪಕಗಳ ನುಗ್ಗಾಟವಿರುವುದು ಹಣಕ್ಕೆ ಸಂಬಂಧಿಸಿದ ಅಂದರೆ ಭೌತಿಕ ಜೀವನದ ಅಗತ್ಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ. ಹೇಳುತ್ತಿರುವ ಮಾತು ಅದರ ತದ್ವಿರುದ್ಧ ದಿಕ್ಕಿನಲ್ಲಿ. ಹೀಗೆ ಪರಸ್ಪರ ವಿರೋಧಿ ವಸ್ತುವನ್ನು ಆಯ್ದುಕೊಂಡು ಕವಿ ದ್ವಂದ್ವ ತುಳುಕುವ ಶೈಲಿಯಲ್ಲಿ ತನ್ನ ಕವನವನ್ನು ಹೆಣೆದಾಗ ಕಾಣಬರುವ ಸೊಬಗೆಂದರೆ ಭಾಷೆಯ ಸ್ತರದಲ್ಲಿಯೇ ಇಂಥಹ ವೈರುಧ್ಯಗಳನ್ನು ಲೇವಡಿ ಮಾಡಿಬಿಡುವ ತುಂಟತನ. ಅದೆಷ್ಟೋ ವರ್ಷಗಳಿಂದ ಓದುಗರು ಈ ಸುನೀತವನ್ನು ಆತ್ಮದ ಹೆಚ್ಚುಗಾರಿಕೆಯ ಕುರಿತಾದ್ದು ಎಂದು ಪರಿಗಣಿಸಿ ಓದುತ್ತಿದ್ದಾರೆ. ಆದರೆ, ಆ ತುಂಟ ಕವಿ ನಗುತ್ತಾನೆ: ದೇಹ ಹೆಚ್ಚೋ, ಆತ್ಮ ಹೆಚ್ಚೋ ಎನ್ನುವ ನುಗ್ಗಾಟ ನಡೆಸಿ ನೀವು; ನಾನು ಮಾತ್ರ ಇಂಥಹ ದ್ವಂದ್ವಗಳ ಕಿರುಕುಳ ಬಗ್ಗೆ ಉಪಹಾಸ ಮಾಡಿಬಿಡುವೆ!

ಸಹಮನಸ್ಕರ ಮದುವೆಗೆ ಅಡಚಣೆಯ ತರಲಾರೆ

ಸಹಮನಸ್ಕರ ಮದುವೆಗೆ ಅಡಚಣೆಯ ತರಲಾರೆ------ ವಿಲಿಯಂ ಶೇಕ್ಸ್ ಪಿಯರ್ (ಸುನೀತ ೧೧೬)

ಸಹಮನಸ್ಕರ ಮದುವೆಗೆ ತಡೆಯ ತರಲಾರೆ
ನಾನು. ಪ್ರೀತಿಯದು ಪ್ರೀತಿಯಲ್ಲ ಕಂಡಂತೆ
ಬದಲಾದ ಪರಿಸರವ ತಾನೂ ಬದಲುತ್ತಲಿರೆ,
ಅಥವಾ ಪ್ರೇಮಿ ನಿಲುವಲ್ಲಿ ಪಲ್ಟಿಯಾದಂತೆ:

ಇಲ್ಲವೇ ಇಲ್ಲ! ಅದೊಂದು ಸದಾಸ್ಥಿರ ಚಿನ್ಹೆ
ಬಿರುಗಾಳಿಯೆದುರಿಗೂ ಕಂಪಿಸದಿರುವುದು.
ಅಲೆವ ನಾವೆಗಳಿಗೆಲ್ಲ ಅದುವೆ ಸ್ಥಾಯಿ ಚುಕ್ಕೆ
ದೂರವರಿತರೂ ಅದರ ಬೆಲೆಯರಿಯದಂತದ್ದು

ಪ್ರೀತಿಯಲ್ಲ ಕಾಲದ ಗುಲಾಮ, ಸುಂದರಾಂಗಗಳು
ಇದ್ದಾವೆ ಅವನ ಡೊಂಕು ಕುಡುಗೋಲಿನ ಅಂಕೆಯಲಿ
ಪ್ರೀತಿಯ ಬದಲಿಸದು ಅವನ ಕ್ಷಣಿಕ ತಾಸು ವಾರಗಳು
ನಾಶದಂಚಿನವರೆಗೂ ತಾಳುವುದು ಕೆಚ್ಚಿನಲಿ.

ರುಜುಮಾಡಿ ತೋರಿದರೆ ನನ್ನೀ ಮಾತು ತರವಲ್ಲ
ನಾನು ಕವಿಯೇ ಅಲ್ಲ, ಪ್ರೇಮಿಯೂ ಎಲ್ಲಿಲ್ಲ.

ಶೇಕ್ಸಪಿಯರನ ಬಹುಚರ್ಚಿತ ಸುನೀತಗಳಲ್ಲಿ ಇದು ಒಂದು. ಇಲ್ಲಿ ಆತ ನಿಜವಾದ ಪ್ರೀತಿ ಹೇಗೆ ಎಂದಿಗೂ ಬದಲದೇ, ದೃವತಾರೆಯಂತೇ ಸ್ಥಿರವಾಗಿಯೂ, ಹಾಗೂ ಅದರಂತೆ ದಿಕ್ಕ್ಸೂಚಿಯಾಗಿಯೂ ಇರುತ್ತದೆ ಎಂದು ವಾದಿಸುತ್ತಾನೆ. ಯುರೋಪಿನ ನವೋದಯ (renaissance) ಕಾಲದ ಆದರ್ಶವಾದೀ ಕಲ್ಪನೆಗಳ ಮಾದರಿಯಲ್ಲಿ ಇದೊಂದು ಉದಾಹರಣೆ. ಇಲ್ಲಿ ನಾವು ಆದರ್ಶವಾದದೊಂದಿಗೆ ಕಾಣುವ ಇನ್ನೊಂದು ಅಂಶವೆಂದರೆ ವಿಚಾರವೊಂದನ್ನು ಎತ್ತಿಕೊಂಡು ವಾದಿಸುತ್ತ ಹೋಗುವ ತಾರ್ಕಿಕ ಧಾಟಿ. ಹಾಗೆಯೇ ಅಂತ್ಯದಲ್ಲಿ ಬರುವ ನಾನು ಕವಿಯೇ ಅಲ್ಲ ಅನ್ನುವ ಮಾತು (i never writ) ಸೂಚಿಸುವಂತೆ ವ್ಯಕ್ತಿಯೊಬ್ಬನ ವಿಚಾರವೂ ಮುಖ್ಯ ಎಂಬ ವಿಶ್ವಾಸ. ಇವೆರಡನ್ನೂ ಯುರೋಪಿನ ನವೋದಯದ ಗುರುತಾಗಿ ಕಾಣುವುದು ವಾಡಿಕೆ. ಹೀಗೆ ಕಾವ್ಯದಲ್ಲಿ ತಾರ್ಕಿಕವಾಗಿ ವಾದಿಸುವ ಶೈಲಿ ಮುಂದೆ metaphysical ಕಾವ್ಯಕ್ಕೆ ದಾರಿ ಮಾಡುತ್ತದೆ; ಅಲ್ಲಿ ಇದು ಅತಿಯೆನ್ನುವ ಮಟ್ಟಿಗೆ ತಲುಪಿ ಶಬ್ದದೊಂದಿಗಿನ ಜಾಣ್ಮೆಯನ್ನು ತೋರುವ ಕವನಗಳೇ ಹೆಚ್ಚಾಗಿ ಬರೆಯಲಾಯಿತು.ಇಲ್ಲಿ, ಶೇಕ್ಸಪಿಯರ ಸಿನಿಕತನವನ್ನು ತೊರೆದ ಒಂದು ಆದರ್ಶ ಪ್ರೀತಿಯನ್ನು ಹೊಗಳುತ್ತಾನೆ. ಇಲ್ಲಿ ಮೊದಲ ಸಾಲಲ್ಲಿ ಬರುವ 'ತಡೆ ತರುವ ವಿಚಾರ' ಕ್ರಿಶ್ಚಿಯನ ಮದುವೆಗಳಲ್ಲಿ ಗಂಡು - ಹೆಣ್ಣು ದಂಪತಿಗಳೆಂದು ಸಾರುವ ಮೊದಲು ಯಾರಾದರೂ ಅವರು ದಂಪತಿಗಳಾಗಬಾರದು ಎಂದು ತಡೆ ತರಬಹುದಾದ ಆಚರಣೆ ಕುರಿತಾಗಿದೆ. ಆದರೆ ಇಲ್ಲಿ 'ಮದುವೆ' ಶಬ್ದ ಸೀಮಿತವಾದದ್ದಲ್ಲ. ಅದನ್ನು ಮಿಲನವೆಂದು ಕೂಡ ಅರ್ಥಿಸಿಕೊಳ್ಳಬಹುದಾಗಿದೆ. ಸಹಮನಸ್ಕರು ('True minds') ಕೂಡ ಪ್ರೇಮಿಗಳಿಗೆ ಉಪಯೋಗಿಸುವ ಸಾಮಾನ್ಯ ಶಬ್ದವಾಗದೇ, ಯಾರು ನಿಜವಾಗಿಯೂ ಪ್ರೇಮಿಸುವ ಯೋಗ್ಯತೆಯುಳ್ಳವರೋ ಅವರ ಕುರಿತಾಗಿದೆ. ಅಂದರೆ, ನಿಜ ಪ್ರೀತಿ ಎನ್ನುವುದನ್ನು ಮಾನಸಿಕ ಅವಸ್ಥೆಯ ಜತೆ ಜೋಡಿಸಿ, ಕವಿ ಪ್ರೀತಿಯಲ್ಲಿ ವೈಚಾರಿಕತೆಯ ಜರೂರಿಯನ್ನು ಸೂಚಿಸುತ್ತಾನೆ. ಹಾಗಾಗಿ, ನಾವು ಸಾಮಾನ್ಯವಾಗಿ ಶೇಕ್ಸಪಿಯರನನ್ನು ರಮ್ಯಕವಿಯಾಗಿ ಕಂಡರೂ, ಅವನಲ್ಲಿಯೂ ವೈಚಾರಿಕತೆಗಿದ್ದ ಒಲವು ಕಾಣಬಹುದಾಗಿದೆ. ಇದನ್ನು ಅನುವಾದ ಮಾಡುತ್ತ ನನ್ನ ಮನಸ್ಸಿನಲ್ಲಿ ಇದ್ದ ವಿಚಾರವೆಂದರೆ ಅನುವಾದಿತ ಕವನವು ಕನ್ನಡದ ಕವನವೆಂದೇ ತೋರುವಂತಾಗಬಾರದು ಎಂದು. ಅನುವಾದದ ಕುರಿತಾಗಿ ಇರುವ ಅನೇಕ ಭಿನ್ನಾಭಿಪ್ರಾಯಗಳಲ್ಲಿ ಇದು ಒಂದು: ಅನುವಾದ ಗುರಿ ಭಾಷೆಯಲ್ಲಿ ಒಂದಾಗಬೇಕೆಂಬುದಾಗಿ, ಯಾ ಮೂಲ ಭಾಷೆ ಬೇರೆ ಎಂಬುದನ್ನು ಓದುಗರಿಗೆ ಸದಾ ನೆನಪಿಸುತ್ತಲಿರಬೇಕೆಂಬುದಾಗಿ. ಹಾಗಾಗಿ ಇಂಗ್ಲೀಷಿನ ಸಾನೆಟ್ ಗೆ ಕನ್ನಡದಲ್ಲಿ ಸುನೀತವೆನ್ನುವುದು ಕೂಡ ಸರಿಯಲ್ಲವೇನೋ ಎಂದು ಕೆಲ ಬಾರಿ ಅನಿಸುತ್ತದೆ. ನನ್ನ ಈ ಅನುವಾದ ಒಂದು ಕಚ್ಚಾ ಪ್ರಯೋಗವಷ್ಟೇ. ಇದನ್ನು ಇತರರೂ ಕೂಡ ಅನುವಾದಿಸಿರಬಹುದು ಈ ಮೊದಲೇ. ನಾನು ಹುಡುಕಿ ನೋಡುವುದು ಬಾಕಿಯಿದೆ.

Tuesday, September 05, 2006

'ಶಿಲೆಯೊಳಗಣ ಪಾವಕನಂತೆ'

ಶಿಲೆಯೊಳಗಣ ಪಾವಕನಂತೆ

ಉದಕದೊಳಗಣ ಪ್ರತಿಬಿಂಬದಂತೆ

ಬೀಜದೊಳಗಣ ವೃಕ್ಷದಂತೆ

ಶಬ್ದದೊಳಗಣ ನಿಶ್ಶಬ್ದದಂತೆ

ಗುಹೇಶ್ವರ, ನಿಮ್ಮ ಶರಣ ಸಂಬಂಧ


ಅಲ್ಲಮಪ್ರಭುವಿನ ಈ ವಚನವನ್ನು ವಿಶ್ಲೇಷಿಸುತ್ತ ಚಿಂತಾಮಣಿ ಕೊಡ್ಲೆಕೆರೆಯವರು ಅನ್ನುತ್ತಾರೆ: "ಭಕ್ತ ಶಿಲೆಯಾದರೆ ಭಗವಂತ ಪಾವಕ, ಭಕ್ತ ಉದಕವಾದರೆ ದೇವರು ಅಲ್ಲಿ ಹುಟ್ಟುವ ಪ್ರತಿಬಿಂಬ... ಮುಂದಿನ ಸಾಲು ಭಗವಂತನನ್ನು 'ಬೀಜದೊಳಗಣ ವೃಕ್ಷ'ವೆಂದು ಗುರುತಿಸುತ್ತದೆ." ಇತ್ಯಾದಿ. ಇದು ಅವರ "ಅಂತರಂಗದ ಆಕಾಶ" ಎನ್ನುವ ಪುಸ್ತಕದಲ್ಲಿ ಬರುವ ಮಾತುಗಳು. ಈ ಪುಸ್ತಕ ತಾತ್ವಿಕತೆ ಹಾಗೂ ಕಾವ್ಯದ ಕುರಿತ ಸಂಬಂಧದ ಅಧ್ಯಯನವಾಗಿದ್ದು, ಕನ್ನಡ ವಿಮರ್ಶಾ ಲೋಕಕ್ಕೆ ಒಳ್ಳೆಯ ಕೊಡುಗೆಯಾಗಿದೆ.ಈ ವಚನವನ್ನು ಓದುತ್ತ ನನಗೆ ಒಂದು ಸಂದೇಹ. ಅಲ್ಲಮನ ತಾತ್ವಿಕ ವಿಚಾರಗಳ ಅರಿವಿಲ್ಲದ ನಾನು ಇದನ್ನು ಒಂದು ಕವನವಾಗಿಯಷ್ಟೇ ಓದುತ್ತಿದ್ದೇನೆ. ವಚನದ ಕೊನೆಯ ಸಾಲಿನ ಬಂಧ ನೋಡಿದರೆ, ಒಟ್ಟೂ ವಚನದಲ್ಲಿ ಬರುವ ಮೊದಲ ಶಬ್ದಗಳು, ಅಂದರೆ, ಶಿಲೆ, ಉದಕ, ಬೀಜ, ಶಬ್ದ, "ನಿಮ್ಮಶರಣ ಸಂಬಂಧ" ದ 'ನಿಮ್ಮ'ದ ಜತೆ ಸೇರುತ್ತವೆ ಹಾಗೂ ಪಾವಕ, ಪ್ರತಿಬಿಂಬ, ವೃಕ್ಷ, ನಿಶ್ಶಬ್ದ, ಇವು 'ಶರಣ'ದ ಜತೆ ಸೇರುವುದೆಂದು ಅನಿಸುತ್ತದೆ. ಅಂದರೆ ಶರಣ ಈ ವಚನದಲ್ಲಿ ಕೊಡ್ಲೆಕೆರೆಯವರು ಅನ್ನುವಂತೆ ಶಿಲೆಯಾಗಿ ಬಾರದೆ ಅದರೊಳಗಣ ಪಾವಕನಾಗಿ, ಹಾಗೂ ಗುಹೇಶ್ವರ ಶಿಲೆಯಾಗಿ ಬರುತ್ತಾರೆ. ಅಂತೆಯೇ ಉಳಿದ ಸಾಲುಗಳಲ್ಲಿ ಕೂಡ. ಹೀಗೆ ನೋಡಿದಾಗ ಪ್ರಾಥಮಿಕತೆ ಬರೀ ತೋರಿಕೆಗಷ್ಟೇ ಅಲ್ಲದೇ ಅರ್ಥದಲ್ಲಿಯೂ ಗುಹೇಶ್ವರನಿಗೆ ಸಲ್ಲುತ್ತದೆ. ಅಂದರೆ, ಶಿಲೆ ಗುಹೇಶ್ವರನಾದರೆ, ಅದರೊಳಗಿರಬಹುದಾದ ಅಂಶಗಳಲ್ಲಿ ಶರಣನೂ ಒಂದು. ಉದಕ ಗುಹೇಶ್ವರನಾದರೆ ಆತನೇ ಇಡೀ ವಿಶ್ವವನ್ನು ಒಳಗೊಂಡಂತೇ ಪ್ರತಿಬಿಂಬಿಸುವನು; ಬೀಜ ಗುಹೇಶ್ವರನಾದರೆ ಶರಣನೆಂಬ ವೃಕ್ಷದ ಹುಟ್ಟಿನ ಮೂಲವೇ ಅವನಾಗುತ್ತಾನೆ. ಶಬ್ದ ಗುಹೇಶ್ವರನಾದರೆ ಅರ್ಥವಂತಿಕೆಯ ಅಂಶವಾದ ನಿಶ್ಶಬ್ದ ಶರಣನಾಗಿರುತ್ತಾನೆ. ಹಾಗೂ ಈ ಸಮೀಕರಣದಲ್ಲಿ ಮೊದಲು ಬರುವ ಅಂಶಗಳು ಹೆಚ್ಚಿನ ವ್ಯಾಪ್ತತೆ ಪಡೆದಿದ್ದು ದೈವಶಕ್ತಿಯ ವಿಶಾಲತೆ ಪಡೆಯುತ್ತವೆ. ಅಂತೆಯೇ, ಅವು ನಿತ್ಯವಾಗಿದ್ದಾದರೆ, ಅವನ್ನು ಅವಲಂಬಿಸಿರುವ ಎರಡನೆಯ ಘಟಕಗಳು ಅನಿತ್ಯ. ನಂತರ ಬರುವ ಅಂಶಗಳು ಒಂದು ಘಟಕವಷ್ಟೇ ಆಗಿ ಮೊದಲಿನ ಘಟಕದಲ್ಲಿಯೇ ಲೀನವಾಗುವ ಅಂಶವಾಗುತ್ತವೆ.ಈ ವಚನದ ರಚನಾ ಬಂಧ ನೋಡಿದರೆ ಕೂಡ ಹೀಗೆ ಓದುವುದು ಸಾಧ್ಯವೆನಿಸುತ್ತದೆ. ಏಕೆಂದರೆ 'ಒಳಗಣ' ಎಂಬ ಪದವು ಮೊದಲು ಬರುವ ಪದಗಳ ಜತೆ ಇದೆ. ಅಂದರೆ 'ಒಳಗೊಳ್ಳುವ' ವ್ಯಾಪ್ತಿ ಆ ಪದಗಳು ಸೂಚಿಸುವ ವಸ್ತುಗಳೊಂದಿಗೆ ಇವೆ. ಶಿಲೆಗೆ ಒಳಗೊಳ್ಳುವ ವ್ಯಾಪ್ತಿಯಿದೆ, ಉದಕಕ್ಕೆ ಪ್ರತಿಬಿಂಬವನ್ನು ಒಳಗೊಳ್ಳುವ ವ್ಯಾಪ್ತಿ ಇದೆ...ಇತ್ಯಾದಿ. ಹೀಗೆ ಒಳಗೊಳ್ಳುವ ವ್ಯಾಪ್ತಿ ಇರುವುದೇ ಗುಹೇಶ್ವರನ ಪ್ರಾಥಮಿಕತೆಯನ್ನು ಸೂಚಿಸುವುದರಿಂದ ಶರಣ ಆತನಲ್ಲಿ ಒಳಗೊಳ್ಳುವದನ್ನು ಬಯಸುತ್ತಾನೆ. ಇನ್ನೊಮ್ಮೆ ಓದಿದರೆ ಅನಿಸುತ್ತದೆ: 'ಶಿಲೆಯೊಳಗಣ ಪಾವಕದಂತೆ' ಇರುವುದು ಏನೆಂದು ಅಲ್ಲಮಪ್ರಭು ಹೇಳುತ್ತಿದ್ದಾನೆ? 'ನಿಮ್ಮ ಶರಣ ಸಂಬಂಧ' ಎಂದು. ಅಂದರೆ, ಇಲ್ಲಿ ಶಿಲೆ ಪಾವಕಗಳು ಅಮುಖ್ಯ ಹಾಗೂ 'ಒಳಗಣ' ಮುಖ್ಯ. ಅಂದರೆ, ಶಿಲೆ ಗುಹೇಶ್ವರನೆಂದಾಗಲೀ, ಪಾವಕ ಶರಣನೆಂದಾಗಲೀ ನೋಡುವ ಬದಲು ಇವೆರಡರ ನಡುವಿನ ಸಂಬಂಧವಷ್ಟೇ ಉಪಮೆಯಾಗಿ ಬರುತ್ತದೆ. ಶಿಲೆ ಹಾಗೂ ಪಾವಕ ಆ ಉಪಮೆಯನ್ನು ಸಾಧ್ಯಗೊಳಿಸುವ ಘಟಕಗಳು ಮಾತ್ರ. ಅಂದರೆ, ಗುಹೇಶ್ವರ ಹಾಗೂ ಶರಣರ ಸಂಬಂಧಕ್ಕೂ, ಶಿಲೆಯೊಳಗೆ ಕಾಣದೆಯೂ ಹೂತಿರುವ ಪಾವಕಕ್ಕೂ ಸಂಬಂಧ ಬರುವುದು ಒಳಗೊಳ್ಳುವ ಅರ್ಥವನ್ನು ಗಮನಿಸಿದಾಗ ಮಾತ್ರ. ಹಾಗಾಗಿ, ಶಿಲೆಯೊಳಗೆ ಸದಾಸಾಧ್ಯವಿರುವ ಪಾವಕ, ನೀರಿನಲ್ಲಿ ಸದಾಸಾಧ್ಯವಿರುವ ಬಿಂಬ, ಬೀಜದಲ್ಲಿ ಸದಾಸಾಧ್ಯವಿರುವ ವೃಕ್ಷ, ಶಬ್ದದಲ್ಲಿ ಸದಾಸಾಧ್ಯವಿರುವ ನಿಶ್ಶಬ್ದದಂತೇ, ಶರಣರು ಗುಹೇಶ್ವರನೊಳಗೇ ಇರುವ ಅಂಶವಾಗಿ ಸಾಬೀತಾಗುತ್ತಾರೆ. ಶಿಲೆಯೊಳಗೆ ಪಾವಕವೇ ಹೊರತು, ಪಾವಕದೊಳಗೆ ಶಿಲೆಯಲ್ಲ. ಹಾಗಾದರೆ, ಗುಹೇಶ್ವರನೊಳಗೆ ಶರಣನಿದ್ದಾನೆ; ಶರಣನೊಳಗೆ ಗುಹೇಶ್ವರನಿಲ್ಲವೇ? 'ಒಳಗಣ' ಎನ್ನುವ ಸಂಬಂಧ ಪರಸ್ಪರವಲ್ಲವೇ? ಶರಣನೊಳಗೆ ಗುಹೇಶ್ವರನನ್ನು ಬರಮಾಡಿಕೊಳ್ಳುವುದೇ ಶರಣನ ಭಕ್ತಿಯ ಉದ್ದೇಶವಾದ್ದರಿಂದ, ಅದು ಈಗಾಗಲೇ ಇರುವ ಸ್ಥಿತಿಯಾಗಲಾರದು. ಈ ವಚನ ಸೂಚಿಸುವ ಭಕ್ತಿಯ ಮೂಲಕ ಆ ಸ್ಥಿತಿಗೆ ಶರಣ ತಲುಪುವ ಆಸೆ ಹೊಂದಿದ್ದಾನೆ. ಇಲ್ಲಿ ಸಂಬಂಧವನ್ನು ಅವಲಂಬನೆಯಾಗಿ ನೋಡಲಾಗಿರುವುದನ್ನು ಗಮನಿಸಬೇಕು. ಗುಹೇಶ್ವರನ ಅವಲಂಬಿಸಿ ಶರಣನಿದ್ದಾನೆ. ಇಲ್ಲಿನ ಉಪಮೆಗಳನ್ನು ಇನ್ನೂ ಗಂಭೀರವಾಗಿ ತಗೊಳ್ಳಬಹುದು. ಅವು ಆರೋಪಿಸುವ ಮಿತಿಯನ್ನು ನೋಡಬೇಕು. ಶರಣನು ಶಿಲೆಯೊಳಗಣ ಪಾವಕದಂತಿದ್ದಾನೆ; ಆದರೆ ಪಾವಕ ಶಿಲೆಯ ಹೊರತೂ ಇದ್ದೀತು. ಅಂದರೆ, ಶಿಲೆಯೊಳಗೇ ಇರಬೇಕಾದುದು ಪಾವಕದ ಇರವಿನ ಕಡ್ಡಾಯ ಸ್ಥಿತಿಯಲ್ಲ. ಹಾಗೆಯೇ ಇತರ ಉಪಮೆಗಳಲ್ಲೂ ಕೂಡ. ಹಾಗಾದರೆ, ಶಿಲೆಯ ಹೊರತಾಗಿ ಪಾವಕವಿದೆಯಾದರೆ ಶಿಲೆಯ ಮಹತ್ವವೇನಿದ್ದೀತು? ಇಲ್ಲಿ, ಒಳಗಣ ಶಬ್ದದ ಒತ್ತಡ ಕೆಲಸ ಮಾಡುತ್ತದೆ. ಅಂದರೆ, ಎಲ್ಲಿಯೂ ಇರಬಹುದಾದ ಪಾವಕ ಶಿಲೆಯೊಳಗಿನದಾಗಿದ್ದರೆ, ಅದನ್ನು ಹೊಮ್ಮಿಸುವ ಕಲೆ ಶಿಲೆಗೆ ಮಾತ್ರ ಸಾಧ್ಯ. ಎಲ್ಲಿಯೂ ಇರಬಹುದಾದ ಶರಣ ಗುಹೇಶ್ವರನೊಂದಿಗಿದ್ದರೆ ಅವನಿಗೆ ಒಳಿತು. ಶರಣನ ವ್ಯಕ್ತಿತ್ವ ಎಲ್ಲಿಯೂ ಪ್ರತಿಫಲಿತವಾಗಬಹುದಾಗಿದ್ದರೂ, ಅದು ಗುಹೇಶ್ವರನೆಂಬ ಉದಕದಲ್ಲಿ ಪ್ರತಿಫಲಿತವಾದರೆ ಶರಣನಿಗೆ ಒಳಿತು... ಇತ್ಯಾದಿ. ಅಂದರೆ ಶರಣನಿಗೆ ಸ್ವಾತಂತ್ರ್ಯವಿದೆ ತನ್ನ ಇರವನ್ನು ಹಾಗೆಯೇ ತನ್ನ ಇಷ್ಟದೇವವನ್ನು ಆಯಲು ಸಹ. ಹಲವು ಆಯ್ಕೆಗಳಲ್ಲಿ ಕವಿ ಈ ಆಯ್ಕೆ ಒಳಿತು ಅನ್ನುವ ಮತ ಹೊಂದಿದ್ದಾನೆ.ಬೆಂಕಿಗೆ ಹೋಲಿಸಿದರೆ ಶಿಲೆ ಸ್ಥಾಯಿಗುಣವಿದೆ. ಪ್ರತಿಬಿಂಬಕ್ಕೆ ಹೋಲಿಸಿದರೆ ಉದಕ ಹೆಚ್ಚು ಮೂರ್ತ. ವೃಕ್ಷಕ್ಕೆ ಹೋಲಿಸಿದರೆ ಬೀಜ ಕಾಣದೆಯೇ ಸೃಜಿಸುವ ಗುಣದ್ದಾಗಿದೆ. ನಿಃಶ್ಶಬ್ದ ಸ್ಥಿತಿಯಿಲ್ಲದ್ದು, ಅಥವಾ ನಿಜವಲ್ಲದ್ದು, ಅಭಾವವನ್ನು ಸೂಚಿಸುವಂತದ್ದು.ಕೊನೆಯ ಸಾಲು ಸೂಚಿಸುವ ಸಮಸ್ಯೆಯೆಂದರೆ: ವಾಚಿಸುವಾತ ಈ ವಚನದೊಳಗಿಲ್ಲ. ಆತ ಮೂರನೆಯವ. ಆತ 'ನಿಮ್ಮ' ಹಾಗೂ 'ಶರಣ' ರ ಸಂಬಂಧವನ್ನು ಬಣ್ಣಿಸಿದ್ದಾನೆ. ನಿಮ್ಮ-ನಮ್ಮ ಸಂಬಂಧವನ್ನಲ್ಲ. ತನ್ನದೇ ಅನುಭವವನ್ನು ಹೇಳುತ್ತಿದ್ದರೆ ಈ ಸಂಬಂಧದ ಸಮೀಕರಣದಲ್ಲಿ ವಾಚಕ ಯಾಕೆ ಕಾಣೆಯಾಗಿದ್ದಾನೆ?

Friday, September 01, 2006

ಬೆರಗಿನ ಡೋಲು

ಬೆರಗಿನ ಡೋಲು ನನ್ನೊಳಗೆ ಬಡಿಯುತಿದೆ
ನದಿಯೊಳಗೆ ಮೀನು ಕುಣಿಯುತಿವೆ
ನೆಲದ ಮೇಲೆ ಗಂಡಸರು ಹೆಂಗಸರು ಕುಣಿಯುತಾರೆ
ನನ್ನ ಡೋಲಿನ ತಾಲಕ್ಕೆ

ಆದರೆ, ಮರಗಳ ಹಿಂದೆ ನಿಂತು
ನಡುವಲ್ಲಿ ಎಲೆಗಳ ಧರಿಸಿ
ಅವಳು ಮುಗುಳ್ನಕ್ಕಳಷ್ಟೇ, ತಲೆಯಾಡಿಸಿ

ಆದರೂ, ನನ್ನ ಡೋಲು ಬಡಿಯುತ್ತಿತ್ತು
ಗಾಳಿ ತರಂಗಗಳೆಬ್ಬಿಸಿ, ತನ್ನ ತೀವ್ರ
ಗತಿಯಿಂದ, ಜೀವಿತರನ್ನು, ಮೃತರನ್ನು
ತಮ್ಮ ನೆರಳುಗಳೊಂದಿಗೆ ಹಾಡಿ ಕುಣಿಯಲು
ಉದ್ದೀಪಿಸುತ್ತ

ಆದರೆ, ಮರಗಳ ಹಿಂದೆ ನಿಂತು
ನಡುವಲ್ಲಿ ಎಲೆಗಳ ಧರಿಸಿ
ಅವಳು ಮುಗುಳ್ನಕ್ಕಳಷ್ಟೇ, ತಲೆಯಾಡಿಸಿ

ಆಗ ಡೋಲು ಬಡಿಯತೊಡಗಿತು ನೆಲದ
ವಸ್ತುಗಳೊಂದಿಗೆ ಲಯದಲ್ಲಿ
ಆಗಸದ ಕಣ್ಣುಗಳ ಬರಮಾಡಿ
ಸೂರ್ಯ, ಚಂದ್ರ ಮತ್ತು ನದಿಯ ದೇವತೆಗಳ
ಮತ್ತು ಮರಗಳು ಕುಣಿಯತೊಡಗಿದವು

ಮೀನು ಮಾನವರಾಗಿ
ಮಾನವರು ಮೀನಾಗಿ
ಮತ್ತು ಎಲ್ಲ ಬೆಳವಣಿಗೆಯೂ ನಿಂತು

ಆದರೆ, ಮರಗಳ ಹಿಂದೆ ನಿಂತು
ನಡುವಲ್ಲಿ ಎಲೆಗಳ ಧರಿಸಿ
ಅವಳು ಮುಗುಳ್ನಕ್ಕಳಷ್ಟೇ, ತಲೆಯಾಡಿಸಿ

ಮತ್ತಾಗ, ನನ್ನೊಳಗಿನ ಡೋಲು ಬಡಿತ ನಿಲ್ಲಿಸಿತು -
ಮಾನವರು ಮಾನವರಾಗಿ
ಮೀನುಗಳು ಮೀನಾಗಿ
ಮತ್ತು ಸೂರ್ಯ, ಚಂದ್ರರೆಲ್ಲ
ತಂತಮ್ಮ ಜಾಗಕ್ಕೆ ತಿರುಗಿ ಹಾಗೂ
ಸತ್ತವರು ಮರಳಿ, ಮತ್ತು
ಅವಳ ತಲೆಯಿಂದ ಎಲೆಗಳು ಹೊರಹೊಮ್ಮಿ

ಮತ್ತು ಮರಗಳ ಹಿಂದೆ ನಿಂತಳು ಅವಳು
ಕಾಲಿಂದ ಬೇರುಗಳು ಮೊಳೆದು
ಎಲೆಗಳು ತಲೆಯಿಂದ ಬೆಳೆದು
ಮೂಗಿಂದ ಹೊಗೆ ಉಗುಳಿ
ಮತ್ತು ಅವಳ ನಗೆ
ಸೂಸುವ ತುಟಿಗಳು
ಕಗ್ಗತ್ತಲ ಕಾರುವ ಗವಿಗಳಾಗಿ ಬದಲಿ

ಆಗ, ನಾನಾಗ ನನ್ನ ಡೋಲೆತ್ತಿ
ತೆರಳಿಬಿಟ್ಟೆ: ಮತ್ತೆಂದೂ ಅಂತೆಯೇ
ಜೋರಾಗಿ ಡೋಲು ಬಡಿಯದೇ.

---- ಗೇಬ್ರಿಯಲ್ ಒಕಾರಾ (The Mystic Drum)

ನೈಜೀರಿಯಾದ ಕವಿ, ಕಾದಂಬರಿಗಾರ ಒಕಾರಾ ತಮ್ಮ ಆಧ್ಯಾತ್ಮಿಕ ಹಾಗೂ ಪ್ರಾಯೋಗಿಕ ಬರವಣಿಗೆಗಾಗಿ ಪ್ರಸಿದ್ಧರು. ೧೯೭೯ ರಲ್ಲಿ Commonwealth Poetry Prize ಪಡೆದ ಒಕಾರಾ ತಮ್ಮ ಬರಹಗಳಲ್ಲಿ ಆಫ್ರಿಕದ ಜಾನಪದ, ಆಧ್ಯಾತ್ಮ, ಸಂಗೀತ ಹಾಗೂ ಲಯಗಾರಿಕೆಯನ್ನು ತರುವ ಮೂಲಕ ತಮ್ಮದೇ ಆದ ಸಂವೇದನಾಶೀಲ ಸೃಜನಶೀಲತೆಯ ರೂಪವನ್ನು ತಂದರು. ಅವರ ಬರಹಗಳಲ್ಲಿ ಆಫ್ರಿಕಾದ ಪುರಾತನ ಸಂಸ್ಕೃತಿ ಆಧುನಿಕ ಸಂಸ್ಕೃತಿಯೊಂದಿಗೆ ಮುಖಾಮುಖಿಯಾಗುವಲ್ಲಿನ ಹಿಂಸೆಯ ರೂಪಕಗಳನ್ನು ಕಾಣುತ್ತೇವೆ.

ನಾನು ಇಲ್ಲಿ ಅನುವಾದಿಸಿರುವ ಅವರ ಕವನವು ಮಿಸ್ಟಿಕ ಡ್ರಮ್ ಎಂಬ ಹೆಸರಿನದು. ಇಲ್ಲಿ ಸಂಸ್ಕೃತಿಯೊಂದರಲ್ಲಿನ ಪಾರಲೌಕಿಕ ತತ್ವಕ್ಕೆ ಸಂವಾದಿಯಾಗಿ ಬರುವ ಡೋಲು, ತನ್ನ ಪ್ರಸ್ತುತ ಪರಿಸರದೊಂದಿಗೆ ಕೊಂಡಿ ಕಳೆದು ಕೊಂಡಾಗ ಹುಟ್ಟುಕೊಳ್ಳುವ ಭೀಕರತೆಯ ಚಿತ್ರವಿದೆ. ಮೂಲದಲ್ಲಿ ಕವಿ ಮಾಡುವ ಭಾಷಾ ಪ್ರಯೋಗಗಳಿಗೆ ತಕ್ಕ ಪರಿಣಾಮಗಳನ್ನು ಅನುವಾದದಲ್ಲಿ ತರಲಾಗಿಲ್ಲ. ಸಂಕೇತಗಳ ದಟ್ಟತೆ ಹಾಗೂ ಲಯ ಮುಖ್ಯವಾಗುವ ಈ ಕವನದಲ್ಲಿ ಡೋಲು ಬಡಿಯುವುದನ್ನು ಜೀವ ಸಾರವೇ ಆಗಿ ಕಾಣಲಾಗಿದೆ. ಇಲ್ಲಿ ಬರುವ 'ಅವಳು' ಪ್ರಕೃತಿ ನಿಯಮದಂತೆ ತೋರುತ್ತಾಳೆ. ಇಲ್ಲಿ ಜೀವಗಳ ನಡುವೆ, ಸಾವು-ಇರವುಗಳ ನಡುವೆ ಸಾಗಾಟವಿದೆ. ಅವುಗಳು ಜೀವವೈಭವದ ತತ್ಪರತೆಯಲ್ಲಿ ಒಂದಾದರೆ, ಡೋಲಿನ ಲಯ ನಿಂತಂತೇ ಮುರಿಯುವ ಸಂವಾದ ಈ ಐಕ್ಯತೆಯನ್ನು ಕೊನೆಗೊಳಿಸಿ, ಏಕ-ಏಕವಾಗಿಸುತ್ತದೆ.
ಇದು ನನಗೆ ವೇದ್ಯವಾದ ಅರ್ಥ. ಇದೊಂದು ಸಂಕೀರ್ಣ ಪದ್ಯವೆನ್ನುವುದು ದಿಟ.

ಬಸವಣ್ಣನವರ ವಚನ: ಚಕೋರಂಗೆ...

ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ
ಅಂಬುಜಕೆ ಭಾನುವಿನ ಉದಯದ ಚಿಂತೆ
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ
ಎನಗೆ ನಮ್ಮ ಕೂಡಲಸಂಗಮದೇವನ ನೆನವುದೆ ಚಿಂತೆ

(ಸ. ಸ. ಮಾಳವಾಡ, ಬಸವಣ್ಣನವರ ವಚನ ಸಂಗ್ರಹ, ೧೯೯೬)

ಬಸವಣ್ಣನವರ ಈ ಪ್ರಖ್ಯಾತ ವಚನ ಓದುವಾಗ ಏಳುವ ಕೆಲವು ಸಮಸ್ಯಗಳನ್ನು ಚರ್ಚಿಸುವುದು ಇಲ್ಲಿ ನನ್ನ ಉದ್ದೇಶ. ಚೆ. ಎ. ಕವಲಿಯವರ ಕನ್ನಡ ಕಸ್ತೂರಿ ಕೋಶದ ಪ್ರಕಾರ ಚಕೋರವೆಂದರೆ ಬೆಳದಿಂಗಳನ್ನು ಸೇವಿಸಿ ಬದುಕುವ ಕಲ್ಪಿತ ಪಕ್ಷಿ. ಅಂಬುಜವೆಂದರೆ ಕಮಲ. ಬಂಡು ಎಂದರೆ ಮಧು. ಶೆಲ್ಡನ್ ಪೊಲಾಕ್ ಹೇಳುವ ದೇಶೀಯವು ಮಾರ್ಗದೊಂದಿಗೆ ನಡೆಸಿಕೊಳ್ಳುವ ಅನುಸಂಧಾನದ ಅಂಶಗಳು ಇಲ್ಲಿ ತೋರುತ್ತಿರಬಹುದು ಶಬ್ದಗಳ ಉಪಯೋಗದ ಸಂದರ್ಭದಲ್ಲಿ. ಆ ಕುರಿತು ನೋಟಹರಿಸದೆ ಈ ನಾಕು ಸಾಲುಗಳಲ್ಲಿ ಬರುವ ಪ್ರತಿಮೆಗಳ ಕಡೆ ಗಮನವಿಡುತ್ತೇನೆ. ಮೊದಲ ಸಾಲಿನಲ್ಲಿ ಬರುವ ಚಿಂತೆ ಒಂದು ಕಲ್ಪಿತ ಪಕ್ಷಿಯದು. ಅದು ಕಲ್ಪಿತ ಪಕ್ಷಿಯಾದರೆ ಅದರ ಚಿಂತೆಯನ್ನು ನಿಜವೆಂದು ಗ್ರಹಿಸಲಾಗದು. ಕವಿಪ್ರಯೋಗದ ಕ್ರಮವೆಂದು ತಳ್ಳಿಹಾಕದೇ ಈ ಪ್ರತಿಮೆಯನ್ನು ನೋಡಿದರೆ, ಇದು ಕಲ್ಪಿತ ಚಿಂತೆಯ ಕುರಿತಾಗಿದೆ ಎನ್ನುವುದು ಸಾಧುವಾದೀತು. ಎರಡನೆಯದಾಗಿ, ಈ ಚಿಂತೆಯ ಕಾಲ: ಅದು ಅನುಪಸ್ಥಿತಿಯಲ್ಲಿ ಉಂಟಾಗುವಂತದ್ದು. ಯಾವುದು ಇಲ್ಲವೋ ಅದರ ಕುರಿತಾದ ಚಿಂತೆಯಾಗಿದೆ. ಅಂದರೆ ಇದು ದಿನದ ಸಮಯದಲ್ಲಿ ರಾತ್ರಿಗಾಗಿ ಇರುವ ಹಂಬಲ. ಹಾಗಾಗಿ ಈ ಕಲ್ಪಿತ ಚಿಂತೆ ಇಲ್ಲದ್ದರ ಕುರಿತು ಇರುವಂತೆ ಬಯಸುವ ಚಿಂತೆ. ಇದನ್ನು ಶರಣನ ಕೂಡಲಸಂಗಮದೇವನ ಕುರಿತಾದ ಚಿಂತೆಯ ಕುರಿತು ಹೇಗೆ ಸಮೀಕರಿಸಿಕೊಳ್ಳೋಣ? ಶರಣನ ಚಿಂತೆಯೂ ಕೆಲವೊಮ್ಮೆ ಕಲ್ಪಿತವೆಂದೇ, ಅಥವಾ ಚಕೋರನಂತೆ ಶರಣನ ಇರವೇ ನಿಜವಲ್ಲವೆಂದೇ? ಹೇಗಿದ್ದರೂ, ಈ ತರದ ಚಿಂತೆ ಶರಣನ ಚಿಂತೆಗಳ ಪೈಕಿಯಲ್ಲೊಂದು. ಇಲ್ಲಿ ಚಿಂತೆ ಎಂದರೆ ಹಂಬಲ, ಬಯಕೆ ಎಂದೇ ನಾನು ತಿಳಿಯುತ್ತೇನೆ. ಹೀಗೆ ಶರಣನು ದೇವನ ಕುರಿತು ಹಂಬಲಿಸುವಾಗ ಅದು ಇಲ್ಲದ ದೇವನ ಕುರಿತು ಇರುವಂತಾಗಿಸಲು ಇರುವ ಹಂಬಲ. ಅಂದರೆ, ದೇವನೊಂದಿಗೆ ಕೂಡಿಕೊಳ್ಳಲು ಇರುವ ಹಂಬಲ. ಪ್ರಸ್ತುತ ಹಾಗೆ ದೇವನೊಡನೆ ಒಂದಾಗಿಲ್ಲವಾದ್ದರಿಂದ ಶರಣ ಒಂದಾಗುವ ತೀವ್ರ ಬಯಕೆಯಲ್ಲಿದ್ದಾನೆ. ಆದರೆ ಕಲ್ಪಿತ ಪಕ್ಷಿಯ ಪ್ರತಿಮೆ ನಮ್ಮನ್ನು ಈ ಶರಣನ ತೊಂದರೆ ಇರುವುದು ಕೂಡ ತನ್ನ ಕಲ್ಪನೆಯಲ್ಲಿ ಎಂದು ಕೂಡ ಸೂಚಿಸುತ್ತದೆ. ಈತ ದೇವನೊಡನೆ ಒಂದಾಗಬೇಕೆಂದು ಬಯಸುವಾಗ ಈಗಾಗಲೇ ಆ ಒಕ್ಕೂಟ ಇದೆಯೆಂದು ಭಾವಿಸುವುದಿಲ್ಲವಾಗಿ ಚಿಂತೆ ಉಂಟಾಗಿದೆ. ಇದು ಹುಸಿ ಚಿಂತೆ, ಯಾಕೆಂದರೆ ಶರಣ-ದೇವನ ಸಂಬಂಧ ಐಕ್ಯದ್ದೇ ಆಗಿದ್ದು, ಅದನ್ನು ಅರಿಯದ್ದರಿಂದ ಶರಣನಿಗೆ ಒಂದಾಗುವ ಕುರಿತಾಗಿ ಸದಾ ಚಿಂತೆಯಿದೆ. ಹೀಗೆ, ಕಲ್ಪಿತ ಪಕ್ಷಿಯ ಪ್ರಸ್ತಾಪದಲ್ಲಿ ತನ್ನ ತಿಳಿವನ್ನೇ ಟೀಕಿಸುತ್ತ ಆ ಕುರಿತೂ ಕೂಡ ಶರಣ ಚಿಂತಿಸುತ್ತಿರುವ ಸೂಚನೆ ಕಂಡು ಬರುತ್ತಿದೆ. ಈ ಪಕ್ಷಿಗೆ ಯಾಕೆ ಬೆಳದಿಂಗಳಿನ ಚಿಂತೆಯೆಂದರೆ, ಅದು ಚಂದ್ರಮನ ಬೆಳಕುಂಡು ಬದುಕುವ ಜೀವಿ. ಅಂದರೆ ಇದು ಐಹಿಕ ಪ್ರಪಂಚದ ಅಗತ್ಯಕ್ಕೆ ಸಂಬಂಧಿಸಿದ ಚಿಂತೆ. ಆಧ್ಯಾತ್ಮಿಕ ಚಿಂತೆಯನ್ನು ಸೂಚಿಸಲು ಐಹಿಕ ಪ್ರತಿಮೆಯನ್ನು ಉಪಯೋಗಿಸುತ್ತಿರುವುದು ವಿಶೇಷವಾಗಿದೆ. ಶರಣನಿಗಾದರೋ ಐಹಿಕದ ಸೆಳೆತವೇ ದೇವನ ಕುರಿತು ಅಭಾವವನ್ನು ಸೃಷ್ಟಿಸಿ ಚಿಂತಿಸುವ ಸ್ಥಿತಿಗೆ ತಂದಿದೆ. ಆದರೆ, ಅದನ್ನು ಐಹಿಕ ಚಿಂತೆಗೇ ತಗಲು ಹಾಕಿ ಬಸವಣ್ಣನವರು ಆಧ್ಯಾತ್ಮಿಕ ಚಿಂತೆಯ ತ್ವರಿತತೆಯನ್ನು ಸೂಚಿಸುತ್ತಿದ್ದಾರೆ. ಹೀಗೆ ಪ್ರತಿಮೆಯ ಸ್ತರದಲ್ಲಿ ಅಂತರವೈರುಧ್ಯವಿರಿಸುವುದು ಬಹಳ ಕುತೂಹಲಕಾರಿ ಕಾವ್ಯತಂತ್ರ. ಇದರಿಂದಾಗಿ ಒಂದು ಮಾತು ಸ್ಪಷ್ಟವಾಗುತ್ತಿದೆ: ಕವಿಯ ಸಾಲುಗಳನ್ನು ಇದು ಹೀಗೇ ಎಂದು ಓದುವಾಗ ಆಲಸಿತನವಿರುತ್ತದೆ. ಆದರೆ, ಇಲ್ಲಿ ವಿರುದ್ಧಾರ್ಥವನ್ನು ಹೆಣೆದು ಕವಿ ಓದುಗನನ್ನು ಎಚ್ಚರಿಸುತ್ತಿದ್ದಾನೆ. ನಮ್ಮನ್ನು ಇದು ಯಾಕೆ ಹೀಗಾಯಿತು ಎಂದು ಕೇಳಲು ಕೆಣಕುತ್ತಿದ್ದಾನೆ. ಎರಡನೆಯ ಸಾಲು ಕಮಲದ ಹೂವೊಂದು ಅರಳಲಿಕ್ಕಾಗಿ ಭಾನುವನ್ನವಲಂಬಿಸಿದೆ, ಹಾಗಾಗಿ ಭಾನು ಉದಯವಾಗುವುದನ್ನು ಹಂಬಲಿಸುತ್ತಿದೆ ಎನ್ನುತ್ತದೆ. ಇದರ ಕಾಲ ಮೊದಲ ಸಾಲಿನ ಕಾಲಕ್ಕೆ ತದ್ವಿರುದ್ಧ. ಮೊದಲ ಸಾಲಿನ ಪ್ರತಿಮೆಯಲ್ಲಿ ದಿನದಲ್ಲಿ ರಾತ್ರಿಯ ಹಂಬಲವಿದ್ದರೆ, ಇಲ್ಲಿ ರಾತ್ರಿಯಲ್ಲಿ ದಿನದ ಹಂಬಲವಿದೆ. ಕಮಲಕ್ಕೆ ಭಾನುವಿನ ಉದಯದ ಚಿಂತೆ ಇರುವುದು ತನ್ನ ಉಳಿವಿಗಾಗಿ; ಅದು ಭಾನುವನ್ನು ಭಕ್ತಿಯಿಂದಲ್ಲ, ಅಗತ್ಯದಿಂದ ಹಂಬಲಿಸುತ್ತಿದೆ. ಆಹಾರಕ್ಕೆ ಬಯಸುವ ಪಕ್ಷಿಯಂತೇ ಇಲ್ಲೂ ಕೂಡ ಐಹಿಕ ಅಗತ್ಯವಿದೆ. ಭಕ್ತಿ ಅಥವಾ ಭಾವವಿಲ್ಲ. ಈ ಚಿಂತೆ ಅಳಿವು ಉಳಿವಿನ ಪ್ರಶ್ನೆ. ಅಧ್ಯಾತ್ಮಿಕ ಪ್ರಶ್ನೆಯಲ್ಲವೇ ಅಲ್ಲ. ಶರಣನ ಚಿಂತೆ ಕೂಡ ತನ್ನ ಉಳಿವಿಗಾಗಿ ದೇವನೊಡನೆ ಐಕ್ಯತೆ ಬೇಕೆಂಬ ಹಂಬಲ ಎನ್ನುವ ಸೂಚನೆ ಇದಾಗಿದೆ. ಮೊದಲ ಸಾಲಿನ ಐಹಿಕ-ಆಧ್ಯಾತ್ಮಿಕ ಸಮೀಕರಣ ಇಲ್ಲಿ ಮುಂದುವರಿದಿದೆ. ಆದರೆ, ಇದು ಕಲ್ಪಿತ ಚಿಂತೆಯಲ್ಲ. ನೈಜ ಜರೂರತ್ತಿನ, ಭೌತಿಕ ಅಗತ್ಯದ ಸೂಚನೆ ನೀಡುವ ಪ್ರತಿಮೆ. ಹಾಗೆ ನೋಡಿದರೆ ಅಂಬುಜದ ಚಿಂತೆ ಭಾನುವಿನೊಡನೆ ಒಂದಾಗಲಾಗಲೀ, ಭಾನುವಿನ ಬಗ್ಗೆಯಾಗಲೀ ಅಲ್ಲ. ತನ್ನ ಕುರಿತೇ ಆಗಿದೆ. ತನ್ನ ಒಳಿತೆಗೆಂದೇ ಆ ಚಿಂತೆ. ಶರಣನಿಗೂ ಕೂಡ ತನ್ನ ಒಳಿತಿಗೆ ದೇವನ ಕುರಿತು ಚಿಂತಿಸುವ ಅಗತ್ಯವಿದೆ. ಆದರೆ ಶರಣನ ಚಿಂತೆಯ ಸ್ವರೂಪವೇನೆಂದರೆ, ತಾನು ದೇವನೊಂದಿಗಿಲ್ಲ, ದೇವನ ಕುರಿತಾಗಲ್ಲದೇ ಭೌತಿಕದ ಕುರಿತಾಗಿಯೇ ಚಿಂತಿಸುತ್ತಿರುವುದು (ಹಾಗಾಗಿ, ಭೌತಿಕ/ಐಹಿಕ ಪ್ರತಿಮೆಗಳು) ಆದ್ದರಿಂದ ಇರದ ಆ ನೆನವು ತನ್ನಲ್ಲಿ ಬರಬೇಕಾಗಿದೆ. ಇಲ್ಲಿ ಗಮನಿಸುವ ಸಂಗತಿಯೆಂದರೆ, ಈ ಸಾಲುಗಳಲ್ಲಿ ಬರುವ ಪ್ರತಿಮೆ ಸೂಚಿಸುವ ಭಾವಕ್ಕೂ, ಶರಣ ತನ್ನದೆನ್ನುವ ಭಾವಕ್ಕೂ ವ್ಯತ್ಯಾಸವಿದೆ. ಅವೆರಡೂ ಒಂದೇ ಅಲ್ಲ. ಅವನ್ನು ಒಂದೇ ತರನ ಹಂಬಲ ಎನ್ನಲಾಗದು. ಆದ್ದರಿಂದ ಈ ಬಗೆಬಗೆಯ ಹಂಬಲವನ್ನು ಹೋಲಿಕೆಯಾಗಿ ಯಾಕೆ ಉಪಯೋಗಿಸಲಾಗುತ್ತಿದೆ ಎನ್ನುವ ಪ್ರಶ್ನೆ ಮೂಡುತ್ತದೆ. ಒಂದು ದೃಷ್ಟಿಯಲ್ಲಿ ಇದಕ್ಕೆ ಕಾರಣವೆಂದರೆ ಶರಣನ ತೊಂದರೆಯ (ಚಿಂತೆ) ಮೂಲವನ್ನು (ಅದೆಂದರೆ ಐಹಿಕದಲ್ಲಿ ತೀರಾ ಮುಳುಗಿರುವುದು) ವಚನದಲ್ಲಿ ದೃಶ್ಯವಾಗಿ ತರುವುದು, ಹಾಗೂ ಆ ಚಿಂತೆಯ ಪರಿಯನ್ನು ಓದುಗರ ಅನುಭವದೊಳಗೆ ತರುವುದು. ಮೂರನೆಯ ಸಾಲಿನಲ್ಲಿ ಬರುವ ಭ್ರಮರದ ಚಿಂತೆಗೆ ಕಾಲದ ಹಂಗಿಲ್ಲ. ಅದರ ಹಂಬಲ ನಿತ್ಯ ಹಾಗೂ ಸದಾ. ಅದೂ ದಿನದಲ್ಲಿ ಆಗುವ ವ್ಯಾಪಾರವೇ ಆದರೂ ಚಿಂತೆ ಕಾಲಕ್ಕೆ ಅಂಟಿದ್ದಲ್ಲವೆಂದಷ್ಟೆ ನನ್ನ ಅರ್ಥ. ಭ್ರಮರಕ್ಕೆ ಚಿಂತೆ ಬಂಡಿನದು, ಹಾಗಾಗಿ ಪರಿಮಳವನ್ನು ಹೂವು ಎಂದು ಕೂಡ ಅರ್ಥೈಸಬಹುದು. (ಅಂದರೆ ಇಂಗ್ಲೀಷಲ್ಲಿ ಸಿನೆಕ್ ಡಕೆ ಅಂತಾರಲ್ಲ ಆ ಕಾವ್ಯೋಕ್ತಿ). ಇಲ್ಲಿಯೂ ಐಹಿಕ ಹಂಬಲ ಮುಂದುವರಿದಿದೆ. ಉಣ್ಣುವ ಹಂಬಲವದಾದ್ದರಿಂದ ಇದೂ ಕೂಡ ಉಳಿವಿಗೆ ಸಂಬಂಧಿಸಿದ್ದು. ಆದರೆ, ಪರಿಮಳ ಶಬ್ದವನ್ನು ಹೂವೆಂದು ಬಗೆಯದೇ, ಹೂವಿನ ಪರಿಮಳ ಎಂದೇ ತಿಳಿದು ಹೊರಟರೆ ಮತ್ತಷ್ಟು ದಟ್ಟ ಅರ್ಥ ದೊರಕುತ್ತದೆ. ಚಿಂತಿಸುತ್ತಿರುವ ಈ ಭ್ರಮರ ಬರೇ ಹೂವಿನ ಬಂಡಿಗಾಗಿ ಹಂಬಲಿಸುತ್ತಿಲ್ಲ, ಪರಿಮಳದ ಹೂವಿನ ಬಂಡಿಗಾಗಿ ಹಂಬಲಿಸುತ್ತಿದೆ. ಅದರ ಚಿಂತೆ ಹಾಗಾಗಿ ಕನಿಷ್ಠ ಭೌತಿಕ ಅಗತ್ಯದ ಕುರಿತಲ್ಲ, ರುಚಿಯ ಕುರಿತು ಅಥವಾ ಮೋಜಿನ ಕುರಿತು. ಶರಣನ ಚಿಂತೆಯ ಜತೆ ಈ ಹೋಲಿಕೆ ಕೂಡ ಹಿಂದಿನ ಸಾಲುಗಳ ಸಂಬಂಧವನ್ನು ಮುಂದುವರಿಸುತ್ತಿದೆಯಾದರೂ ಹೊಸ ಅಂಶ ಸೇರಿಕೊಳ್ಳುತ್ತಿದೆ. ಅದೆಂದರೆ, ಉಳಿವಿನ ಹೊರತಾಗಿ ಬರುವ ಅಗತ್ಯಗಳು: ಐಹಿಕ ಆಸೆಗಳು. ಶರಣನ ಚಿಂತೆಗೆ ಈ ಭೂಮಿಕೆಯೂ ಕಂಡುಬರುತ್ತಿದೆ: ಬೇಕು ಎಂಬ ಆಸೆ (ವಾಂಛಲ್ಯ). ಒಂದು ತರದಲ್ಲಿ ಇದು ಅತಿಆಸೆಯ ಕಡೆ ಸೂಚಿಸುತ್ತಿದೆ.ಒಟ್ಟಾರೆ ಈ ಮೂರು ಸಾಲುಗಳಲ್ಲಿ ನಾವು ಮೂರು ಬಗೆಯ ಚಿಂತೆಗಳನ್ನು ಕಾಣುತ್ತೇವೆ: ಹುಸಿ ಚಿಂತೆ (ಇದು ತಿಳಿವಿನ ಅಭಾವದಿಂದ ಬರುವ ಮಾನಸಿಕ ಹಂಬಲ), ಉಳಿವ ಚಿಂತೆ (ಪ್ರಾಣಿಸಹಜ ಪ್ರಾಣದಾಸೆ), ಹಾಗೂ ಮೋಜಿನ ಚಿಂತೆ (ಇದು ಸಜೀವವಿರಲೆಂದಲ್ಲ, ರುಚಿಗಾಗಿ ಪಡುವ ಆಸೆ). ಶರಣನಿಗೆ ದೇವನ ಕುರಿತಾಗಿ ಇರುವ ಚಿಂತೆಯನ್ನು ಹೀಗೆ ಬಗೆಬಗೆಯಾಗಿ ಇಲ್ಲಿ ನೋಡಲಾಗುತ್ತಿದೆ. ಹುಸಿ ಚಿಂತೆ ಶರಣನ ತಿಳಿವಿನ ಅಭಾವವನ್ನು ಸೂಚಿಸುತ್ತದೆ; ಉಳಿವ ಚಿಂತೆ ಅವನ ಜರೂರತ್ತನ್ನು ಸೂಚಿಸುತ್ತದೆ; ಮೋಜಿನ ಚಿಂತೆ ಅವನ ಹಾಡುವ ಮೂಲಕ ಭಕ್ತಿ ಪ್ರಕಟಿಸುವ ಆಡಂಬರವನ್ನು ಸೂಚಿಸುತ್ತದೆ. ಒಟ್ಟಾರೆ ಇಲ್ಲಿ ಶರಣನಿಗೆ ದೇವನ ಕುರಿತಾಗಿರುವ ಜೀವಿಯ ಚಿಂತೆಯನ್ನು ಅವನ ಕುಂದುಗಳ ಕುರುಹಾಗಿಯೂ ಕಾಣುತ್ತಾನೆ. ಅಂದರೆ ದೇವನ ಕುರಿತಾದ ಚಿಂತೆಯು, ಜೀವಿಯಲ್ಲಿ ಆಧ್ಯಾತ್ಮಿಕತೆಯ ಕೊರತೆಯನ್ನು ಕಾಣಿಸುತ್ತದೆ, ಹಾಗೆಂದೇ ಇಲ್ಲಿ ಬರುವ ಪ್ರತಿಮೆಗಳಲ್ಲಿ ಇರದರ ಕುರಿತಾದ ಚಿಂತೆಗಳ ಸೂಚನೆ ಕಂಡುಬರುತ್ತವೆ. ಶರಣ ಕೂಡಲಸಂಗಮನ ನೆನೆವುದು, ಚಕೋರ ಬೆಳದಿಂಗಳನ್ನು ಬಯಸಿದಂತೆ, ಅಂಬುಜ ಸೂರ್ಯೋದಯವನ್ನು ಬಯಸಿದಂತೆ, ಭ್ರಮರ ಬಂಡುಣ್ಣುವದನ್ನು ಬಯಸಿದಂತೆ ಎನ್ನುವ ಹೋಲಿಕೆಗಳ ಮಾಲೆ, ಶರಣನ ಈ ತರದ ನೆನಕೆಯಲ್ಲಿ ವ್ಯಕ್ತವಾಗುವ ಕುಂದನ್ನು, ಹಾಗೂ ಹಾಡುವ (ಹೇಳುವ) ಮೂಲಕ ಅದನ್ನು ಕಾರ್ಯಗತಗೊಳಿಸುವ ಬದಲಾಗಿ ಆಡಂಬರಿಸುವ ಕುರಿತಾದ ಟೀಕೆಯಾಗಿಯೂ ಕಾಣಬರುತ್ತದೆ. ಯಾಕೆಂದರೆ, ಶರಣ ದೇವನ ನೆನೆಯ ಬಯಸಿದರೆ ಆ ಕುರಿತು ಹೇಳುತ್ತ (ವಚನ - ಮಾತಾಡು) ಕೂರುವ ಅಗತ್ಯವಿಲ್ಲ. ಹಾಗೆ ಮಾಡುವಲ್ಲಿ ಶರಣನ ಕೊರತೆಯಾದ ಮಾನವೀಯ ಅಹಂ ಕಂಡುಬರುತ್ತದೆ. ಇದನ್ನು ಗೆಲ್ಲುವ ಪ್ರಯತ್ನಕ್ಕಾಗಿ ದೇವನ ನೆನಕೆ ಬೇಕಾಗಿದೆ.ಬಸವಣ್ಣನವರ ಈ ಸುಂದರ ವಚನವನ್ನು ಚಿಕ್ಕಂದಿನಿಂದಲೂ ಕೇಳುತ್ತ ಬಂದಿರುವ ನಾನು, ಇಲ್ಲಿ ಅದನ್ನು ಅರ್ಥ ಮಾಡಿಕೊಳ್ಳುವ ಪ್ರಯಾಸ ಮಾಡಿಕೊಂಡಿದ್ದೇನೆ. ಇದು ಒಂದು ಓದು; ಬೇರೆ ಬಗೆಯ ಓದು ಸಾಧ್ಯ. ಅಥವಾ ಈ ಓದು ಕೂಡ ಶರಣನ ಚಿಂತೆಯಂತೆ ತಾನುವಿನ ಆಡಂಬರದಿಂದ ಮುಕ್ತವಾಗಿಲ್ಲದಿರಬಹುದು.

ಹೆಣ್ಣು ಗಂಡಿಗೆ

ಕುರುಡು ಕರ್ಮಚಾರಿ ರಾತ್ರಿಯಲ್ಲಿ
ತಾನಿರದ, ರೂಪವಿರದ ಬೀಜ ನನ್ನೊಳಗೆ
ತನ್ನ ಪುನರಜ್ಜೀವನಕ್ಕೆ ಅಣಿಯಾಗುತ್ತದೆ
ಮೌನ ಹಾಗೂ ಕ್ಷಿಪ್ರ ಹಾಗೂ ದೃಷ್ಟಿಯಿಂದ ದೂರದಲ್ಲಿ
ಕಲ್ಪಿಸಿರದ ಬೆಳಕನ್ನು ಮುಂಗಾಣುತ್ತದೆ.

ಮಗು ಮುಖದ ಮಗುವಿದಲ್ಲ
ಹೆಸರಿಸುವಂತ ಹೆಸರಿದಕ್ಕಿಲ್ಲ
ಆದರೂ, ನಾನು ಮತ್ತು ನೀನು ಬಲ್ಲೆವು
ಇದು ನಮ್ಮ ಶಿಕಾರಿಯೂ, ಬೇಟೆಯೂ ಹೌದು
ನಮ್ಮ ಅಪ್ಪುಗೆಯೊಳಗಿನ ಮೂರನೆಯವ.

ನಿನ್ನ ತೋಳುಗಳು ಬಲ್ಲ ಸತ್ವವಿದು
ನನ್ನ ಮೊಲೆಗಳ ಅರ್ಧಚಂದ್ರಾಕಾರ
ನಮ್ಮ ಕಣ್ಣುಗಳೊಳಗಿನ ಸ್ಪಷ್ಟ ಹರಳು
ಇದುವೇ ನೆತ್ತರ ಕಾಡುಮರದೊಳಗೆ
ಬೆಳೆವ ಸಂಕೀರ್ಣ ನೆರಿಗೆಗಳ ಗುಲಾಬಿ.

ಇದುವೆ ಸೃಜನೆಯೂ, ಸೃಜಿಸುವಾತನೂ
ಇದುವೆ ಪ್ರಶ್ನೆಯೂ, ಉತ್ತರವೂ
ಇರುಳಲ್ಲಿ ತಿವಿಯುವ ಕುರುಡು ತಲೆ
ಅಲಗಿನಗುಂಟ ಮಿಂಚುವ ಬೆಳಕಪೂರ;
ಓ, ತಬ್ಬಿಕೋ ನನ್ನ, ಭಯವಾಗುತ್ತಿದೆ.

---- ಜುಡಿತ್ ರೈಟ್

ಆಸ್ಟ್ರೇಲಿಯದ ಆಧುನಿಕ ಕವಿಯಾದ ಜುಡಿತ್ ರೈಟ್ (ಬ್. ೧೯೧೫ - ೨೦೦೦) ಎರಡನೆಯ ಮಹಾಯುದ್ಧದ ತರುವಾಯದಿಂದ ಬರೆಯುತ್ತ ಬಂದಿದ್ದಾಳೆ. ಇವಳು ಅಬೊರಿಜನಲರ ಹಕ್ಕಿಗಾಗಿ ಸೆಣಸಿದಳು. ತನ್ನ ಪದ್ಯಗಳಲ್ಲಿ ನೇರವಾದ ಗೇಯತೆಗಾಗಿ ಪ್ರಸಿದ್ದಳಂತೆ. 'ಹೆಣ್ಣು ಗಂಡಿಗೆ' ಎಂಬ ಈ ಪದ್ಯ ನನಗೆ ಇಷ್ಟವಾಗಲು ಕಾರಣ ಇಲ್ಲಿ ಗರ್ಭಿಣಿ ಮಹಿಳೆ ತನ್ನಾತನಿಗೆ ತನ್ನೊಳಗೆ ಇದೇ ರೂಪುಗೊಳ್ಳುತ್ತಿರುವ ಜೀವದ ಕುರಿತಾಗಿ ಹೇಳುವ ಪರಿ. ಇಲ್ಲಿ ಕೋಮಲತೆ ಇದೆ, ರಮ್ಯತೆಯ ಬದಲು; ಇಲ್ಲಿ ಅಚ್ಚರಿ ಇದೆ, ಹುಚ್ಚು ಸಂತಸದ ಬದಲು; ಇಲ್ಲಿ ಫುಳಕವಿದೆ, ಜತೆಗೇ ಭೀತಿಯೂ. ಹೆಣ್ಣು ತಾನೊಬ್ಬಳೇ ಅಲ್ಲ, ತನ್ನಾತನನ್ನು ಆ ಫುಳಕದಲ್ಲಿ ಸೇರಿಸಿಕೊಂಡಿದ್ದಾಳೆ. ಒಂದು ಸೃಜನ ಕ್ಷಣದ ಕುರಿತಾಗಿ ಅತಿ ಸೂಕ್ಷ್ಮವೂ, ಸ್ಪಷ್ಟವೂ, ನಿಖರವೂ ಆದ ದನಿಯಲ್ಲಿ ಈ ಕವನ ಅನನ್ಯ ಅನುಭೂತಿಯನ್ನು ವ್ಯಕ್ತಮಾಡುತ್ತಿದೆ.

ನುಡಿ

ನುಡಿಗಳೇ ಎನ್ನ ರತ್ನಗಳು
ನುಡಿಗಳೇ ಎನ್ನ ವಸ್ತ್ರಗಳು
ನುಡಿಗಳೇ ಎನ್ನ ಜೀವಾನ್ನ
ನುಡಿಗಳೇ ನಾನೀವ ಧನದಾನ
ನುಡಿಗಳೇ ಎನ್ನದೇವರೆಂಬ ತುಕಾ
ನುಡಿಗಳೇ ಎನಗೆ ಪೂಜ್ಯ

---------- ತುಕಾರಾಮ (ಮರಾಠಿ ಸಂತಕವಿ)

ಇಲ್ಲಿ ಕಾಣಲಿರುವ ಬರಹ

ಓದಿದ್ದು, ಅನಿಸಿದ್ದು, ಅನುವಾದಿಸಿದ್ದು ಇವೆಲ್ಲ ಇಲ್ಲಿ ಆಗೀಗ ಕಾಣಿಸಿಕೊಳ್ಳಬಹುದು. ಬರೆವ ಅಭ್ಯಾಸ ಹಾಗೂ ಶಿಸ್ತು ನನಗೆ ದೊರಕುವ ಲಾಭ. ಓದುಗರಿಗೆ ಕೆಲ ವಿಚಾರಗಳ ಜಾಗ.