ನುಡಿಬೀಡು

ಅಲ್ಲಿಲ್ಲಿ ಅಷ್ಟಿಷ್ಟು ನೋಡಿದ್ದು ಕೇಳಿದ್ದು ಓದಿದ್ದು

Name:

ನುಡಿಗಳೇ ಎನ್ನ ರತ್ನಗಳು ನುಡಿಗಳೇ ಎನ್ನ ವಸ್ತ್ರಗಳು ನುಡಿಗಳೇ ಎನ್ನ ಜೀವಾನ್ನ ನುಡಿಗಳೇ ನಾನೀವ ಧನದಾನ ನುಡಿಗಳೇ ಎನ್ನದೇವರೆಂಬ ತುಕಾ ನುಡಿಗಳೇ ಎನಗೆ ಪೂಜ್ಯ ---------- ತುಕಾರಾಮ

Friday, September 01, 2006

ಬಸವಣ್ಣನವರ ವಚನ: ಚಕೋರಂಗೆ...

ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ
ಅಂಬುಜಕೆ ಭಾನುವಿನ ಉದಯದ ಚಿಂತೆ
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ
ಎನಗೆ ನಮ್ಮ ಕೂಡಲಸಂಗಮದೇವನ ನೆನವುದೆ ಚಿಂತೆ

(ಸ. ಸ. ಮಾಳವಾಡ, ಬಸವಣ್ಣನವರ ವಚನ ಸಂಗ್ರಹ, ೧೯೯೬)

ಬಸವಣ್ಣನವರ ಈ ಪ್ರಖ್ಯಾತ ವಚನ ಓದುವಾಗ ಏಳುವ ಕೆಲವು ಸಮಸ್ಯಗಳನ್ನು ಚರ್ಚಿಸುವುದು ಇಲ್ಲಿ ನನ್ನ ಉದ್ದೇಶ. ಚೆ. ಎ. ಕವಲಿಯವರ ಕನ್ನಡ ಕಸ್ತೂರಿ ಕೋಶದ ಪ್ರಕಾರ ಚಕೋರವೆಂದರೆ ಬೆಳದಿಂಗಳನ್ನು ಸೇವಿಸಿ ಬದುಕುವ ಕಲ್ಪಿತ ಪಕ್ಷಿ. ಅಂಬುಜವೆಂದರೆ ಕಮಲ. ಬಂಡು ಎಂದರೆ ಮಧು. ಶೆಲ್ಡನ್ ಪೊಲಾಕ್ ಹೇಳುವ ದೇಶೀಯವು ಮಾರ್ಗದೊಂದಿಗೆ ನಡೆಸಿಕೊಳ್ಳುವ ಅನುಸಂಧಾನದ ಅಂಶಗಳು ಇಲ್ಲಿ ತೋರುತ್ತಿರಬಹುದು ಶಬ್ದಗಳ ಉಪಯೋಗದ ಸಂದರ್ಭದಲ್ಲಿ. ಆ ಕುರಿತು ನೋಟಹರಿಸದೆ ಈ ನಾಕು ಸಾಲುಗಳಲ್ಲಿ ಬರುವ ಪ್ರತಿಮೆಗಳ ಕಡೆ ಗಮನವಿಡುತ್ತೇನೆ. ಮೊದಲ ಸಾಲಿನಲ್ಲಿ ಬರುವ ಚಿಂತೆ ಒಂದು ಕಲ್ಪಿತ ಪಕ್ಷಿಯದು. ಅದು ಕಲ್ಪಿತ ಪಕ್ಷಿಯಾದರೆ ಅದರ ಚಿಂತೆಯನ್ನು ನಿಜವೆಂದು ಗ್ರಹಿಸಲಾಗದು. ಕವಿಪ್ರಯೋಗದ ಕ್ರಮವೆಂದು ತಳ್ಳಿಹಾಕದೇ ಈ ಪ್ರತಿಮೆಯನ್ನು ನೋಡಿದರೆ, ಇದು ಕಲ್ಪಿತ ಚಿಂತೆಯ ಕುರಿತಾಗಿದೆ ಎನ್ನುವುದು ಸಾಧುವಾದೀತು. ಎರಡನೆಯದಾಗಿ, ಈ ಚಿಂತೆಯ ಕಾಲ: ಅದು ಅನುಪಸ್ಥಿತಿಯಲ್ಲಿ ಉಂಟಾಗುವಂತದ್ದು. ಯಾವುದು ಇಲ್ಲವೋ ಅದರ ಕುರಿತಾದ ಚಿಂತೆಯಾಗಿದೆ. ಅಂದರೆ ಇದು ದಿನದ ಸಮಯದಲ್ಲಿ ರಾತ್ರಿಗಾಗಿ ಇರುವ ಹಂಬಲ. ಹಾಗಾಗಿ ಈ ಕಲ್ಪಿತ ಚಿಂತೆ ಇಲ್ಲದ್ದರ ಕುರಿತು ಇರುವಂತೆ ಬಯಸುವ ಚಿಂತೆ. ಇದನ್ನು ಶರಣನ ಕೂಡಲಸಂಗಮದೇವನ ಕುರಿತಾದ ಚಿಂತೆಯ ಕುರಿತು ಹೇಗೆ ಸಮೀಕರಿಸಿಕೊಳ್ಳೋಣ? ಶರಣನ ಚಿಂತೆಯೂ ಕೆಲವೊಮ್ಮೆ ಕಲ್ಪಿತವೆಂದೇ, ಅಥವಾ ಚಕೋರನಂತೆ ಶರಣನ ಇರವೇ ನಿಜವಲ್ಲವೆಂದೇ? ಹೇಗಿದ್ದರೂ, ಈ ತರದ ಚಿಂತೆ ಶರಣನ ಚಿಂತೆಗಳ ಪೈಕಿಯಲ್ಲೊಂದು. ಇಲ್ಲಿ ಚಿಂತೆ ಎಂದರೆ ಹಂಬಲ, ಬಯಕೆ ಎಂದೇ ನಾನು ತಿಳಿಯುತ್ತೇನೆ. ಹೀಗೆ ಶರಣನು ದೇವನ ಕುರಿತು ಹಂಬಲಿಸುವಾಗ ಅದು ಇಲ್ಲದ ದೇವನ ಕುರಿತು ಇರುವಂತಾಗಿಸಲು ಇರುವ ಹಂಬಲ. ಅಂದರೆ, ದೇವನೊಂದಿಗೆ ಕೂಡಿಕೊಳ್ಳಲು ಇರುವ ಹಂಬಲ. ಪ್ರಸ್ತುತ ಹಾಗೆ ದೇವನೊಡನೆ ಒಂದಾಗಿಲ್ಲವಾದ್ದರಿಂದ ಶರಣ ಒಂದಾಗುವ ತೀವ್ರ ಬಯಕೆಯಲ್ಲಿದ್ದಾನೆ. ಆದರೆ ಕಲ್ಪಿತ ಪಕ್ಷಿಯ ಪ್ರತಿಮೆ ನಮ್ಮನ್ನು ಈ ಶರಣನ ತೊಂದರೆ ಇರುವುದು ಕೂಡ ತನ್ನ ಕಲ್ಪನೆಯಲ್ಲಿ ಎಂದು ಕೂಡ ಸೂಚಿಸುತ್ತದೆ. ಈತ ದೇವನೊಡನೆ ಒಂದಾಗಬೇಕೆಂದು ಬಯಸುವಾಗ ಈಗಾಗಲೇ ಆ ಒಕ್ಕೂಟ ಇದೆಯೆಂದು ಭಾವಿಸುವುದಿಲ್ಲವಾಗಿ ಚಿಂತೆ ಉಂಟಾಗಿದೆ. ಇದು ಹುಸಿ ಚಿಂತೆ, ಯಾಕೆಂದರೆ ಶರಣ-ದೇವನ ಸಂಬಂಧ ಐಕ್ಯದ್ದೇ ಆಗಿದ್ದು, ಅದನ್ನು ಅರಿಯದ್ದರಿಂದ ಶರಣನಿಗೆ ಒಂದಾಗುವ ಕುರಿತಾಗಿ ಸದಾ ಚಿಂತೆಯಿದೆ. ಹೀಗೆ, ಕಲ್ಪಿತ ಪಕ್ಷಿಯ ಪ್ರಸ್ತಾಪದಲ್ಲಿ ತನ್ನ ತಿಳಿವನ್ನೇ ಟೀಕಿಸುತ್ತ ಆ ಕುರಿತೂ ಕೂಡ ಶರಣ ಚಿಂತಿಸುತ್ತಿರುವ ಸೂಚನೆ ಕಂಡು ಬರುತ್ತಿದೆ. ಈ ಪಕ್ಷಿಗೆ ಯಾಕೆ ಬೆಳದಿಂಗಳಿನ ಚಿಂತೆಯೆಂದರೆ, ಅದು ಚಂದ್ರಮನ ಬೆಳಕುಂಡು ಬದುಕುವ ಜೀವಿ. ಅಂದರೆ ಇದು ಐಹಿಕ ಪ್ರಪಂಚದ ಅಗತ್ಯಕ್ಕೆ ಸಂಬಂಧಿಸಿದ ಚಿಂತೆ. ಆಧ್ಯಾತ್ಮಿಕ ಚಿಂತೆಯನ್ನು ಸೂಚಿಸಲು ಐಹಿಕ ಪ್ರತಿಮೆಯನ್ನು ಉಪಯೋಗಿಸುತ್ತಿರುವುದು ವಿಶೇಷವಾಗಿದೆ. ಶರಣನಿಗಾದರೋ ಐಹಿಕದ ಸೆಳೆತವೇ ದೇವನ ಕುರಿತು ಅಭಾವವನ್ನು ಸೃಷ್ಟಿಸಿ ಚಿಂತಿಸುವ ಸ್ಥಿತಿಗೆ ತಂದಿದೆ. ಆದರೆ, ಅದನ್ನು ಐಹಿಕ ಚಿಂತೆಗೇ ತಗಲು ಹಾಕಿ ಬಸವಣ್ಣನವರು ಆಧ್ಯಾತ್ಮಿಕ ಚಿಂತೆಯ ತ್ವರಿತತೆಯನ್ನು ಸೂಚಿಸುತ್ತಿದ್ದಾರೆ. ಹೀಗೆ ಪ್ರತಿಮೆಯ ಸ್ತರದಲ್ಲಿ ಅಂತರವೈರುಧ್ಯವಿರಿಸುವುದು ಬಹಳ ಕುತೂಹಲಕಾರಿ ಕಾವ್ಯತಂತ್ರ. ಇದರಿಂದಾಗಿ ಒಂದು ಮಾತು ಸ್ಪಷ್ಟವಾಗುತ್ತಿದೆ: ಕವಿಯ ಸಾಲುಗಳನ್ನು ಇದು ಹೀಗೇ ಎಂದು ಓದುವಾಗ ಆಲಸಿತನವಿರುತ್ತದೆ. ಆದರೆ, ಇಲ್ಲಿ ವಿರುದ್ಧಾರ್ಥವನ್ನು ಹೆಣೆದು ಕವಿ ಓದುಗನನ್ನು ಎಚ್ಚರಿಸುತ್ತಿದ್ದಾನೆ. ನಮ್ಮನ್ನು ಇದು ಯಾಕೆ ಹೀಗಾಯಿತು ಎಂದು ಕೇಳಲು ಕೆಣಕುತ್ತಿದ್ದಾನೆ. ಎರಡನೆಯ ಸಾಲು ಕಮಲದ ಹೂವೊಂದು ಅರಳಲಿಕ್ಕಾಗಿ ಭಾನುವನ್ನವಲಂಬಿಸಿದೆ, ಹಾಗಾಗಿ ಭಾನು ಉದಯವಾಗುವುದನ್ನು ಹಂಬಲಿಸುತ್ತಿದೆ ಎನ್ನುತ್ತದೆ. ಇದರ ಕಾಲ ಮೊದಲ ಸಾಲಿನ ಕಾಲಕ್ಕೆ ತದ್ವಿರುದ್ಧ. ಮೊದಲ ಸಾಲಿನ ಪ್ರತಿಮೆಯಲ್ಲಿ ದಿನದಲ್ಲಿ ರಾತ್ರಿಯ ಹಂಬಲವಿದ್ದರೆ, ಇಲ್ಲಿ ರಾತ್ರಿಯಲ್ಲಿ ದಿನದ ಹಂಬಲವಿದೆ. ಕಮಲಕ್ಕೆ ಭಾನುವಿನ ಉದಯದ ಚಿಂತೆ ಇರುವುದು ತನ್ನ ಉಳಿವಿಗಾಗಿ; ಅದು ಭಾನುವನ್ನು ಭಕ್ತಿಯಿಂದಲ್ಲ, ಅಗತ್ಯದಿಂದ ಹಂಬಲಿಸುತ್ತಿದೆ. ಆಹಾರಕ್ಕೆ ಬಯಸುವ ಪಕ್ಷಿಯಂತೇ ಇಲ್ಲೂ ಕೂಡ ಐಹಿಕ ಅಗತ್ಯವಿದೆ. ಭಕ್ತಿ ಅಥವಾ ಭಾವವಿಲ್ಲ. ಈ ಚಿಂತೆ ಅಳಿವು ಉಳಿವಿನ ಪ್ರಶ್ನೆ. ಅಧ್ಯಾತ್ಮಿಕ ಪ್ರಶ್ನೆಯಲ್ಲವೇ ಅಲ್ಲ. ಶರಣನ ಚಿಂತೆ ಕೂಡ ತನ್ನ ಉಳಿವಿಗಾಗಿ ದೇವನೊಡನೆ ಐಕ್ಯತೆ ಬೇಕೆಂಬ ಹಂಬಲ ಎನ್ನುವ ಸೂಚನೆ ಇದಾಗಿದೆ. ಮೊದಲ ಸಾಲಿನ ಐಹಿಕ-ಆಧ್ಯಾತ್ಮಿಕ ಸಮೀಕರಣ ಇಲ್ಲಿ ಮುಂದುವರಿದಿದೆ. ಆದರೆ, ಇದು ಕಲ್ಪಿತ ಚಿಂತೆಯಲ್ಲ. ನೈಜ ಜರೂರತ್ತಿನ, ಭೌತಿಕ ಅಗತ್ಯದ ಸೂಚನೆ ನೀಡುವ ಪ್ರತಿಮೆ. ಹಾಗೆ ನೋಡಿದರೆ ಅಂಬುಜದ ಚಿಂತೆ ಭಾನುವಿನೊಡನೆ ಒಂದಾಗಲಾಗಲೀ, ಭಾನುವಿನ ಬಗ್ಗೆಯಾಗಲೀ ಅಲ್ಲ. ತನ್ನ ಕುರಿತೇ ಆಗಿದೆ. ತನ್ನ ಒಳಿತೆಗೆಂದೇ ಆ ಚಿಂತೆ. ಶರಣನಿಗೂ ಕೂಡ ತನ್ನ ಒಳಿತಿಗೆ ದೇವನ ಕುರಿತು ಚಿಂತಿಸುವ ಅಗತ್ಯವಿದೆ. ಆದರೆ ಶರಣನ ಚಿಂತೆಯ ಸ್ವರೂಪವೇನೆಂದರೆ, ತಾನು ದೇವನೊಂದಿಗಿಲ್ಲ, ದೇವನ ಕುರಿತಾಗಲ್ಲದೇ ಭೌತಿಕದ ಕುರಿತಾಗಿಯೇ ಚಿಂತಿಸುತ್ತಿರುವುದು (ಹಾಗಾಗಿ, ಭೌತಿಕ/ಐಹಿಕ ಪ್ರತಿಮೆಗಳು) ಆದ್ದರಿಂದ ಇರದ ಆ ನೆನವು ತನ್ನಲ್ಲಿ ಬರಬೇಕಾಗಿದೆ. ಇಲ್ಲಿ ಗಮನಿಸುವ ಸಂಗತಿಯೆಂದರೆ, ಈ ಸಾಲುಗಳಲ್ಲಿ ಬರುವ ಪ್ರತಿಮೆ ಸೂಚಿಸುವ ಭಾವಕ್ಕೂ, ಶರಣ ತನ್ನದೆನ್ನುವ ಭಾವಕ್ಕೂ ವ್ಯತ್ಯಾಸವಿದೆ. ಅವೆರಡೂ ಒಂದೇ ಅಲ್ಲ. ಅವನ್ನು ಒಂದೇ ತರನ ಹಂಬಲ ಎನ್ನಲಾಗದು. ಆದ್ದರಿಂದ ಈ ಬಗೆಬಗೆಯ ಹಂಬಲವನ್ನು ಹೋಲಿಕೆಯಾಗಿ ಯಾಕೆ ಉಪಯೋಗಿಸಲಾಗುತ್ತಿದೆ ಎನ್ನುವ ಪ್ರಶ್ನೆ ಮೂಡುತ್ತದೆ. ಒಂದು ದೃಷ್ಟಿಯಲ್ಲಿ ಇದಕ್ಕೆ ಕಾರಣವೆಂದರೆ ಶರಣನ ತೊಂದರೆಯ (ಚಿಂತೆ) ಮೂಲವನ್ನು (ಅದೆಂದರೆ ಐಹಿಕದಲ್ಲಿ ತೀರಾ ಮುಳುಗಿರುವುದು) ವಚನದಲ್ಲಿ ದೃಶ್ಯವಾಗಿ ತರುವುದು, ಹಾಗೂ ಆ ಚಿಂತೆಯ ಪರಿಯನ್ನು ಓದುಗರ ಅನುಭವದೊಳಗೆ ತರುವುದು. ಮೂರನೆಯ ಸಾಲಿನಲ್ಲಿ ಬರುವ ಭ್ರಮರದ ಚಿಂತೆಗೆ ಕಾಲದ ಹಂಗಿಲ್ಲ. ಅದರ ಹಂಬಲ ನಿತ್ಯ ಹಾಗೂ ಸದಾ. ಅದೂ ದಿನದಲ್ಲಿ ಆಗುವ ವ್ಯಾಪಾರವೇ ಆದರೂ ಚಿಂತೆ ಕಾಲಕ್ಕೆ ಅಂಟಿದ್ದಲ್ಲವೆಂದಷ್ಟೆ ನನ್ನ ಅರ್ಥ. ಭ್ರಮರಕ್ಕೆ ಚಿಂತೆ ಬಂಡಿನದು, ಹಾಗಾಗಿ ಪರಿಮಳವನ್ನು ಹೂವು ಎಂದು ಕೂಡ ಅರ್ಥೈಸಬಹುದು. (ಅಂದರೆ ಇಂಗ್ಲೀಷಲ್ಲಿ ಸಿನೆಕ್ ಡಕೆ ಅಂತಾರಲ್ಲ ಆ ಕಾವ್ಯೋಕ್ತಿ). ಇಲ್ಲಿಯೂ ಐಹಿಕ ಹಂಬಲ ಮುಂದುವರಿದಿದೆ. ಉಣ್ಣುವ ಹಂಬಲವದಾದ್ದರಿಂದ ಇದೂ ಕೂಡ ಉಳಿವಿಗೆ ಸಂಬಂಧಿಸಿದ್ದು. ಆದರೆ, ಪರಿಮಳ ಶಬ್ದವನ್ನು ಹೂವೆಂದು ಬಗೆಯದೇ, ಹೂವಿನ ಪರಿಮಳ ಎಂದೇ ತಿಳಿದು ಹೊರಟರೆ ಮತ್ತಷ್ಟು ದಟ್ಟ ಅರ್ಥ ದೊರಕುತ್ತದೆ. ಚಿಂತಿಸುತ್ತಿರುವ ಈ ಭ್ರಮರ ಬರೇ ಹೂವಿನ ಬಂಡಿಗಾಗಿ ಹಂಬಲಿಸುತ್ತಿಲ್ಲ, ಪರಿಮಳದ ಹೂವಿನ ಬಂಡಿಗಾಗಿ ಹಂಬಲಿಸುತ್ತಿದೆ. ಅದರ ಚಿಂತೆ ಹಾಗಾಗಿ ಕನಿಷ್ಠ ಭೌತಿಕ ಅಗತ್ಯದ ಕುರಿತಲ್ಲ, ರುಚಿಯ ಕುರಿತು ಅಥವಾ ಮೋಜಿನ ಕುರಿತು. ಶರಣನ ಚಿಂತೆಯ ಜತೆ ಈ ಹೋಲಿಕೆ ಕೂಡ ಹಿಂದಿನ ಸಾಲುಗಳ ಸಂಬಂಧವನ್ನು ಮುಂದುವರಿಸುತ್ತಿದೆಯಾದರೂ ಹೊಸ ಅಂಶ ಸೇರಿಕೊಳ್ಳುತ್ತಿದೆ. ಅದೆಂದರೆ, ಉಳಿವಿನ ಹೊರತಾಗಿ ಬರುವ ಅಗತ್ಯಗಳು: ಐಹಿಕ ಆಸೆಗಳು. ಶರಣನ ಚಿಂತೆಗೆ ಈ ಭೂಮಿಕೆಯೂ ಕಂಡುಬರುತ್ತಿದೆ: ಬೇಕು ಎಂಬ ಆಸೆ (ವಾಂಛಲ್ಯ). ಒಂದು ತರದಲ್ಲಿ ಇದು ಅತಿಆಸೆಯ ಕಡೆ ಸೂಚಿಸುತ್ತಿದೆ.ಒಟ್ಟಾರೆ ಈ ಮೂರು ಸಾಲುಗಳಲ್ಲಿ ನಾವು ಮೂರು ಬಗೆಯ ಚಿಂತೆಗಳನ್ನು ಕಾಣುತ್ತೇವೆ: ಹುಸಿ ಚಿಂತೆ (ಇದು ತಿಳಿವಿನ ಅಭಾವದಿಂದ ಬರುವ ಮಾನಸಿಕ ಹಂಬಲ), ಉಳಿವ ಚಿಂತೆ (ಪ್ರಾಣಿಸಹಜ ಪ್ರಾಣದಾಸೆ), ಹಾಗೂ ಮೋಜಿನ ಚಿಂತೆ (ಇದು ಸಜೀವವಿರಲೆಂದಲ್ಲ, ರುಚಿಗಾಗಿ ಪಡುವ ಆಸೆ). ಶರಣನಿಗೆ ದೇವನ ಕುರಿತಾಗಿ ಇರುವ ಚಿಂತೆಯನ್ನು ಹೀಗೆ ಬಗೆಬಗೆಯಾಗಿ ಇಲ್ಲಿ ನೋಡಲಾಗುತ್ತಿದೆ. ಹುಸಿ ಚಿಂತೆ ಶರಣನ ತಿಳಿವಿನ ಅಭಾವವನ್ನು ಸೂಚಿಸುತ್ತದೆ; ಉಳಿವ ಚಿಂತೆ ಅವನ ಜರೂರತ್ತನ್ನು ಸೂಚಿಸುತ್ತದೆ; ಮೋಜಿನ ಚಿಂತೆ ಅವನ ಹಾಡುವ ಮೂಲಕ ಭಕ್ತಿ ಪ್ರಕಟಿಸುವ ಆಡಂಬರವನ್ನು ಸೂಚಿಸುತ್ತದೆ. ಒಟ್ಟಾರೆ ಇಲ್ಲಿ ಶರಣನಿಗೆ ದೇವನ ಕುರಿತಾಗಿರುವ ಜೀವಿಯ ಚಿಂತೆಯನ್ನು ಅವನ ಕುಂದುಗಳ ಕುರುಹಾಗಿಯೂ ಕಾಣುತ್ತಾನೆ. ಅಂದರೆ ದೇವನ ಕುರಿತಾದ ಚಿಂತೆಯು, ಜೀವಿಯಲ್ಲಿ ಆಧ್ಯಾತ್ಮಿಕತೆಯ ಕೊರತೆಯನ್ನು ಕಾಣಿಸುತ್ತದೆ, ಹಾಗೆಂದೇ ಇಲ್ಲಿ ಬರುವ ಪ್ರತಿಮೆಗಳಲ್ಲಿ ಇರದರ ಕುರಿತಾದ ಚಿಂತೆಗಳ ಸೂಚನೆ ಕಂಡುಬರುತ್ತವೆ. ಶರಣ ಕೂಡಲಸಂಗಮನ ನೆನೆವುದು, ಚಕೋರ ಬೆಳದಿಂಗಳನ್ನು ಬಯಸಿದಂತೆ, ಅಂಬುಜ ಸೂರ್ಯೋದಯವನ್ನು ಬಯಸಿದಂತೆ, ಭ್ರಮರ ಬಂಡುಣ್ಣುವದನ್ನು ಬಯಸಿದಂತೆ ಎನ್ನುವ ಹೋಲಿಕೆಗಳ ಮಾಲೆ, ಶರಣನ ಈ ತರದ ನೆನಕೆಯಲ್ಲಿ ವ್ಯಕ್ತವಾಗುವ ಕುಂದನ್ನು, ಹಾಗೂ ಹಾಡುವ (ಹೇಳುವ) ಮೂಲಕ ಅದನ್ನು ಕಾರ್ಯಗತಗೊಳಿಸುವ ಬದಲಾಗಿ ಆಡಂಬರಿಸುವ ಕುರಿತಾದ ಟೀಕೆಯಾಗಿಯೂ ಕಾಣಬರುತ್ತದೆ. ಯಾಕೆಂದರೆ, ಶರಣ ದೇವನ ನೆನೆಯ ಬಯಸಿದರೆ ಆ ಕುರಿತು ಹೇಳುತ್ತ (ವಚನ - ಮಾತಾಡು) ಕೂರುವ ಅಗತ್ಯವಿಲ್ಲ. ಹಾಗೆ ಮಾಡುವಲ್ಲಿ ಶರಣನ ಕೊರತೆಯಾದ ಮಾನವೀಯ ಅಹಂ ಕಂಡುಬರುತ್ತದೆ. ಇದನ್ನು ಗೆಲ್ಲುವ ಪ್ರಯತ್ನಕ್ಕಾಗಿ ದೇವನ ನೆನಕೆ ಬೇಕಾಗಿದೆ.ಬಸವಣ್ಣನವರ ಈ ಸುಂದರ ವಚನವನ್ನು ಚಿಕ್ಕಂದಿನಿಂದಲೂ ಕೇಳುತ್ತ ಬಂದಿರುವ ನಾನು, ಇಲ್ಲಿ ಅದನ್ನು ಅರ್ಥ ಮಾಡಿಕೊಳ್ಳುವ ಪ್ರಯಾಸ ಮಾಡಿಕೊಂಡಿದ್ದೇನೆ. ಇದು ಒಂದು ಓದು; ಬೇರೆ ಬಗೆಯ ಓದು ಸಾಧ್ಯ. ಅಥವಾ ಈ ಓದು ಕೂಡ ಶರಣನ ಚಿಂತೆಯಂತೆ ತಾನುವಿನ ಆಡಂಬರದಿಂದ ಮುಕ್ತವಾಗಿಲ್ಲದಿರಬಹುದು.

0 Comments:

Post a Comment

<< Home